ಮರವಂತೆ: ಬಡಾಕೆರೆಯ ಪುರಾತನ ಪ್ರಸಿದ್ಧ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ಅನುದಾನ ಮಂಜೂರುಗೊಳಿಸುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭರವಸೆ ನೀಡಿದ್ದಾರೆ.
ಫೆಬ್ರವರಿ 9ರಂದು ಜರಗಿದ ವಾರ್ಷಿಕ ದೇವಸ್ಥಾನದ ಶ್ರೀಮನ್ಮಹಾರಥೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ನೂತನ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ, ತಾನು ಮುಜರಾಯಿ ಸಚಿವನಾದ ಮೇಲೆ ಮುಜರಾಯಿ ಇಲಾಖೆ ಮೂಲಕ ರಾಜ್ಯದ ಬಹುತೇಕ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ದುಡಿಯುತ್ತಿರುವುದಾಗಿ ಅವರು ಹೇಳಿದರು.
ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾದ ಸಂಜೀವ ಪೂಜಾರಿ ಹಕ್ರೆಮನೆ, ದೇವದಾಸ್ ಶೇಟ್, ಗಿರಿಜಾ ದೇವಾಡಿಗ, ಸುಭಾಶ್ ಮೊಗವೀರ, ತಾಲೂಕು ಪಂಚಾಯತ್ ಸದಸ್ಯ ಮಹೇಂದ್ರ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ವಾಸು ಪೂಜಾರಿ, ದಿನೇಶ್ ಶೆಟ್ಟಿ ಬಡಾಕೆರೆ, ಶ್ರೀಧರ ಬಡಾಕೆರೆ ಮೊದಲಾದವರು ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಕ್ರಪಾಣಿ ಅಡಿಗ ಸ್ವಾಗತಿಸಿದರು. ಬಡಾಕೆರೆ ಶಾಲಾ ಶಿಕ್ಷಕ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ರವಿರಾಮ ದೇವಾಡಿಗ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com