ಅಂಗವಿಕಲರ ರಕ್ಷಣೆಗಾಗಿ ಸಂಘಟನೆ ಸ್ಥಾಪನೆ ಅತಿ ಅಗತ್ಯ: ಜಿ.ಎನ್. ನಾಗರಾಜ


ಕುಂದಾಪುರ: ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಗ್ರಾಮಾಂತರ ಪ್ರದೇಶದ ಜನ ಬಡತನ, ಅನಕ್ಷರತೆ, ಅಸಹಾಯಕತೆ, ಹಸಿವು ಇವೆಲ್ಲದರೊಂದಿಗೆ ಅಂಗವಿಕಲತೆ ಎಂಬ ಮಾರಕ ರೋಗಕ್ಕೆ ಬಲಿಯಾಗಿ ಜೀವನ ನಡೆಸಲು ಕ್ಷಣ ಕ್ಷಣವೂ ಹೋರಾಡ ಬೇಕಾದ ಸ್ಥಿತಿ ಇದೆ. ಹಾಗಾಗಿ ಅಂಗವಿಕಲರ ರಕ್ಷಣೆಗಾಗಿ ಹೋರಾಡಲು ಸಂಘಟನೆಯೊಂದು ಅತಿ ಅಗತ್ಯವಾಗಿದೆ ಎಂದು ಜಿ.ಎನ್. ನಾಗರಾಜ ಹೇಳಿದರು.
ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಹಾಗೂ ರಾಜ್ಯ ಅಂಗವಿಕಲರ ಒಕ್ಕೂಟದ ಸಂಯೋಜನೆಯಲ್ಲಿ ಕುಂದಾಪುರದಲ್ಲಿ ನಡೆದ ಅಂಗವಿಕಲರ ಉಡುಪಿ ಜಿಲ್ಲಾ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲರಾದ ನಾವು ನಮ್ಮ ಸಮಸ್ಯೆಗಳಿಗೆ ಪರಿಹಾರ ಮಾರ್ಗವನ್ನು ನಾವೇ ಕಂಡುಕೊಂಡು ಆ ಮೂಲಕ  ವ್ಯವಸ್ಥಿತ ಹೋರಾಟ ನಡೆಸಿ ಸಫಲತೆ ಪಡೆಯಬೇಕಾಗಿದೆ.  ಅಸಹಾಯಕರಾದ ಎಲ್ಲಾ ಅಂಗವಿಕಲರನ್ನು ರಕ್ಷಣೆ ಮಾಡುವುದರೊಂದಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಒದಗಿಸಿಕೊಡುವುದಕ್ಕೆ ನಮ್ಮ ಸಂಘಟನೆ ಒತ್ತಾಯಿಸಬೇಕಾಗಿದೆ. ಅಂಗವಿಕಲರ ಮತ್ತು ಅಂಗವಿಕಲರ ಮಕ್ಕಳಿಗೆ ಶಿಕ್ಷಣ, ವೃತ್ತಿಪರ ಮತ್ತು ಪದವೀಧರ ಶಿಕ್ಷಣ ತರಬೇತಿ, ಕೈಗಾರಿಕಾ ತರಬೇತಿ, ಮಾಹಿತಿ ತಂತ್ರಜ್ಞಾನ ಮತ್ತು ಸ್ವಯಂ ಉದ್ಯೋಗ, ವೈದ್ಯಕೀಯ ಸೌಲಭ್ಯ ಕಾನೂನು ನೆರವು, ಮನೆ, ಮೂಲಭೂತ ಸೌಕರ್ಯಗಳು ಉಚಿತವಾಗಿ ಪಡೆಯುವಂತಾಗಬೇಕು ಎಂದರು.
ಸಮಾವೇಶದಲ್ಲಿ ಅಂಗವಿಕಲ ಸಬಲೀಕರಣ ಅಧಿಕಾರಿ ನಿರಂಜನ್ ಭಟ್ ಎಂ., ವಾಗ್ಜೋತಿ ಕಿವುಡ ಮತ್ತು ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ, ಕೋಟೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ದೃಷ್ಟಿಹೀನ ಸುಬ್ರಹ್ಮಣ್ಯ ಎ., ಮಂಜುನಾಥ  ಹೆಬ್ಬಾರ್ ಕಾಲ್ತೋಡು, ಮಂಜುಳಾ ಸುಭಾಷ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com