ಬೈಂದೂರು ತಾಲೂಕಿಗೆ ವಂಡ್ಸೆ ಹೋಬಳಿ ಸೇರ್ಪಡೆಗೆ ಗ್ರಾಮಸ್ಥರ ವಿರೋಧ


ಗ್ರಾಮಸ್ಥರ ಪ್ರತಿಭಟನೆ, ವಂಡ್ಸೆ ತಾಲೂಕು ರಚನೆಗೆ ಆಗ್ರಹ
ವಂಡ್ಸೆ: ಪ್ರಸ್ತಾವಿತ ಬೈಂದೂರು ಕೇಂದ್ರೀಕೃತ ನೂತನ ತಾಲೂಕಿಗೆ ವಂಡ್ಸೆ ಹೋಬಳಿಯ ಪ್ರದೇಶಗಳನ್ನು ಸೇರಿಸುವುದನ್ನು ವಿರೋದಿಸಿ ವಂಡ್ಸೆ ನಾಡಕಚೇರಿ ಎದುರು ಶನಿವಾರ ಸಂಜೆ ವ್ಯಾಪ್ತಿಯ ನೂರಾರು ಜನರು ಪ್ರತಿಭಟನೆ ನಡೆಸಿದರು.

     ಬೈಂದೂರು ವಿಧಾನಸಭಾ ವ್ಯಾಪ್ತಿಯ ಬೈಂದೂರು ಹೋಬಳಿ ಗ್ರಾಮಗಳನ್ನು ಸೇರಿಸಿ ಬೈಂದೂರು ಕೇಂದ್ರೀಕೃತ ತಾಲೂಕು ರಚನೆ ಮಾಡುವುದಾದರೆ ತಮ್ಮ ಆಕ್ಷೇಪವಿಲ್ಲ. ಆದರೆ ವಂಡ್ಸೆ ಹೋಬಳಿಯ ಗ್ರಾಮಗಳಾದ ಯಡಮೊಗೆ, ಹಳ್ಳಿಹೊಳೆ, ಕಮಲಶಿಲೆ, ಬೆಳ್ಳಾಲ, ಆಜ್ರಿ, ಕೊಡ್ಲಾಡಿ, ಕರ್ಕುಂಜೆ, ಗುಲ್ವಾಡಿ, ಕೆಂಚನೂರು, ಹಟ್ಟಿಯಂಗಡಿ, ಕನ್ಯಾನ, ಉಪ್ಪಿನಕುದ್ರು, ತಲ್ಲೂರು, ಕೆರಾಡಿ, ಹೊಸೂರು, ಇಡೂರು-ಕುಂಜ್ಞಾಡಿ, ಚಿತ್ತೂರು, ವಂಡ್ಸೆ, ದೇವಲ್ಕುಂದ, ಕಟ್ಬೇಲ್ತೂರು, ಹೆಮ್ಮಾಡಿ, ಆಲೂರು, ಹಕರ್ೂರು, ಕುಂದಬಾರಂದಾಡಿ, ಹಕ್ಲಾಡಿ, ನಾಡಾ, ಬಡಾಕೆರೆ, ಸೇನಾಪುರ, ಗುಜ್ಜಾಡಿ, ಹೊಸಾಡು, ತ್ರಾಸಿ, ಮರವಂತೆ ಸೇರಿದಂತೆ ಒಟ್ಟು 32 ಗ್ರಾಮಗಳ ಗ್ರಾಮಸ್ಥರು ಮತ್ತು ಈ ಮೊದಲು ಕುಂದಾಪುರ ಕ್ಷೇತ್ರದಲ್ಲಿದ್ದ ಗ್ರಾಮದವರನ್ನು ನೂತನ ಬೈಂದೂರು ತಾಲೂಕಿಗೆ ಸೇರಿಸದೇ ಕುಂದಾಪುರ ತಾಲೂಕಿನಲ್ಲಿಯೇ ಉಳಿಸಬೇಕು. ವಂಡ್ಸೆಗೆ ವಿಶೇಷ ತಹಶೀಲ್ದಾರ್ ನೇಮಕಗೊಳಿಸಬೇಕು ಮತ್ತು ವಂಡ್ಸೆ ಹೋಬಳಿಯ 39 ಗ್ರಾಮಗಳನ್ನೊಳಗೊಂಡ ನೂತನ ವಂಡ್ಸೆ ತಾಲೂಕು ರಚನೆ ಆಗಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 
    ವಂಡ್ಸೆ ಹೋಬಳಿಯ ಎಲ್ಲಾ ಗ್ರಾಮಗಳು ಹಾಗೂ ಬೈಂದೂರು ಹೋಬಳಿಯ ಹಳ್ಳಿಹೊಳೆ, ನಾಡಾ, ಬಡಾಕೆರೆ ಮತ್ತು ಹಲವು ಗ್ರಾಮಗಳ ರಸ್ತೆ ಸಂಪರ್ಕದ ದೃಷ್ಟಿಯಿಂದ ಹಾಗೂ ಭೌಗೋಳಿಕವಾಗಿಯೂ ಕುಂದಾಪುರಕ್ಕೆ ಹತ್ತಿರವಾಗಿದ್ದು, ಈ ಎಲ್ಲಾ ಗ್ರಾಮದ ಜನರು ಬೈಂದೂರಿಗೆ ಹೋಗಬೇಕಾದರೆ ಕುಂದಾಪುರ ಪೇಟೆಗೆ ಬಂದೋ, ತಲ್ಲೂರು, ಹೆಮ್ಮಾಡಿ ಅಥವಾ ಹೊಸಾಡಿಗೆ ಬಂದು ಹೋಗಬೇಕಾಗುತ್ತದೆ. ತಲ್ಲೂರಿನಿಂದ ಕುಂದಾಪುರಕ್ಕೆ 3 ಕಿ. ಮೀ.- ಬೈಂದೂರಿಗೆ 29 ಕಿ. ಮೀ., ಹೆಮ್ಮಾಡಿಯಿಂದ ಕುಂದಾಪುರಕ್ಕೆ 8 ಕಿ.ಮೀ.- ಬೈಂದೂರಿಗೆ 27 ಕಿ. ಮೀ., ಹೊಸಾಡಿನಿಂದ ಕುಂದಾಪುರಕ್ಕೆ 10 ಕಿ. ಮೀ. ಬೈಂದೂರಿಗೆ 24 ಕಿ. ಮೀ ಅಂತರವಿದೆ. ವಂಡ್ಸೆ-ಕುಂದಾಪುರಕ್ಕೆ 18 ಕಿ. ಮೀ. ಬೈಂದೂರಿಗೆ 42 ಕಿ. ಮೀ., ಚಿತ್ತೂರು-ಕುಂದಾಪುರಕ್ಕೆ 22 ಕಿ. ಮೀ. ಬೈಂದೂರಿಗೆ 46 ಕಿ. ಮೀ, ಇಡೂರು-ಕುಂದಾಪುರಕ್ಕೆ 25 ಕಿ. ಮೀ. ಬೈಂದೂರಿಗೆ 44 ಕಿ.ಮೀ., ಹೊಸೂರು-ಕುಂದಾಪುರಕ್ಕೆ 26 ಕಿ. ಮೀ. ಬೈಂದೂರಿಗೆ 50 ಕಿ. ಮೀ., ಕೆರಾಡಿ-ಕುಂದಾಪುರಕ್ಕೆ 28 ಕಿ.ಮೀ. ಬೈಂದೂರಿಗೆ 55 ಕಿ. ಮೀ., ಬೆಳ್ಳಾಲ-ಕುಂದಾಪುರಕ್ಕೆ 25 ಕಿ.ಮೀ. ಬೈಂದೂರಿಗೆ 55 ಕಿ.ಮೀ., ಹಕ್ಲಾಡಿ-ಕುಂದಾಪುರಕ್ಕೆ 19 ಕಿ.ಮೀ. ಬೈಂದೂರಿಗೆ 31 ಕಿ.ಮೀ., ಆಲೂರು-ಕುಂದಾಪುರಕ್ಕೆ 23 ಕಿ.ಮೀ. ಬೈಂದೂರಿಗೆ 36 ಕಿ.ಮೀ., ಕರ್ಕುಂಜೆ-ಕುಂದಾಪುರಕ್ಕೆ 12 ಕಿ.ಮೀ. ಬೈಂದೂರಿಗೆ 45 ಕಿ.ಮೀ., ಹಟ್ಟಿಯಂಗಡಿ-ಕುಂದಾಪುರಕ್ಕೆ 6 ಕಿ.ಮೀ. ಬೈಂದೂರಿಗೆ 35 ಕಿ.ಮೀ., ಹೆಮ್ಮಾಡಿ-ಕುಂದಾಪುರಕ್ಕೆ 8 ಕಿ.ಮೀ. ಬೈಂದೂರಿಗೆ 27 ಕಿ.ಮೀ. ಅಂತರವಿದೆ. ಒಂದೊಮ್ಮೆ ವಂಡ್ಸೆ ಹೋಬಳಿಯ ಗ್ರಾಮಗಳನ್ನು ಬೈಂದೂರು ತಾಲೂಕು ಅಥವಾ ನ್ಯಾಯಾಲಯ ವ್ಯಾಪ್ತಿಗೆ ಸೇರಿಸಿದಲ್ಲಿ ಗ್ರಾಮಸ್ಥರು ಈಗ ತಾಲೂಕು ಕೇಂದ್ರ ಮತ್ತು ನ್ಯಾಯಾಲಯಕ್ಕೆ ಬರಲು ಕ್ರಮಿಸಬೇಕಾದ ಅಂತರದಿಂದ ಮೂರು ಪಟ್ಟು ಹೆಚ್ಚು ಅಂತರವನ್ನು ಕ್ರಮಿಸಬೇಕಾಗುತ್ತದೆ. 
    ವಂಡ್ಸೆ ಹೋಬಳಿ ಗ್ರಾಮಗಳ ಜನರು ಕುಂದಾಪುರಕ್ಕೆ ತಲುಪಲು ಒಂದು ಬಸ್ಸು, ಆದರೆ ಬೈಂದೂರಿಗೆ ಹೋಗಲು ಎರಡು ಬಸ್ಸುಗಳನ್ನು ಹಿಡಿಯಬೇಕು. ವಿಸ್ತೀರ್ಣದಲ್ಲಿ ವಂಡ್ಸೆ ಹೋಬಳಿ ದೊಡ್ಡದಾಗಿದ್ದು ಗುಡ್ಡಗಾಡು, ಮಲೆನಾಡು ಪ್ರದೇಶದಿಂದ ಕೂಡಿದೆ. ರಸ್ತೆ ಸಂಪರ್ಕಗಳು ಕಡಿಮೆ ಇದೆ. ಬಹುತೇಕ ವಾಣಿಜ್ಯ ಹಾಗೂ ಸಾಮಾಜಿಕ ಸಮಾರಂಭಗಳು ಕುಂದಾಪುರದಲ್ಲಿ ನಡೆಯುತ್ತವೆ. ತಾಲೂಕು ರಚನೆಗೆ ಎಲ್ಲಾ ಅನುಕೂಲತೆಗಳನ್ನು ಹೊಂದಿರುವ ವಂಡ್ಸೆ ಹೋಬಳಿಯನ್ನು ತಾಲೂಕಾಗಿ ರಚನೆ ಮಾಡಬೇಕು ಎಂದು ಇಲ್ಲಿನ ಗ್ರಾಮ ಪಂಚಾಯತ್ಗಳು ಕೂಡಾ ನಿರ್ಣಯಗಳನ್ನು ಕೈಗೊಂಡಿದ್ದು, ಈಗಾಗಲೇ ಎಂ. ಟಿ. ಪ್ರಕಾಶ್ ನೇತೃತ್ವದ ತಾಲೂಕು ರಚನಾ ಸಮಿತಿಗೆ ಕುಂದಾಪುರ, ವಂಡ್ಸೆ ಮತ್ತು ಬೈಂದೂರು ಹೋಬಳಿಯ ನಕ್ಷೆ ಮತ್ತು ಬಸ್ಮಾರ್ಗಸಹಿತ ಮನವಿಯನ್ನು ಸಲ್ಲಿಸಿ ಮನವರಿಕೆ ಮಾಡಿಕೊಡಲಾಗಿದೆ. ಏತನ್ಮಧ್ಯೆ ಅದಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ವಂಡ್ಸೆ ಹೋಬಳಿ ಗ್ರಾಮಗಳನ್ನು ಏಕಾಏಕಿಯಾಗಿ ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸಲು ಮುಂದಾದಲ್ಲಿ ಪಕ್ಷಾತೀತ ಹಾಗೂ ರಾಜಕೀಯರಹಿತ ನೆಲೆಯಲ್ಲಿ ತಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾ ನೇತೃತ್ವ ವಹಿಸಿದ್ದ ನ್ಯಾಯವಾದಿ ಟಿ. ಬಿ. ಶೆಟ್ಟಿ ಅವರು ಹೇಳಿದರು.
  ಪ್ರತಿಭಟನೆಯಲ್ಲಿ ಡಾ. ಅತುಲ್ಕುಮಾರ್ ಶೆಟ್ಟಿ ಚಿತ್ತೂರು, ತಾ. ಪಂ. ಸದಸ್ಯ ಎಚ್. ಮಂಜಯ್ಯ ಶೆಟ್ಟಿ, ಶಾಲಿನಿ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ಕೆಂಚನೂರು ಸೋಮಶೇಖರ ಶೆಟ್ಟಿ, ಕುಸುಮಾಕರ ಶೆಟ್ಟಿ, ವಂಡ್ಸೆ ಗ್ರಾ. ಪಂ. ಅಧ್ಯಕ್ಷ ಅಡಿಕೆಕೊಡ್ಲು ಉದಯಕುಮಾರ್ ಶೆಟ್ಟಿ ಮೊದಲಾದವರು ಮಾತನಾಡಿದರು. ವಿವಿಧ ಗ್ರಾ. ಪಂ. ಅಧ್ಯಕ್ಷ ಮತ್ತು ಸದಸ್ಯರು, ಸಂಘ-ಸಂಸ್ಥೆಗಳ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು. ಬಹಿರಂಗ ಸಭೆಯ ಬಳಿಕ ಸಾರ್ವಜನಿಕ ಮನವಿಯನ್ನು ವಂಡ್ಸೆ ನಾಡಕಚೇರಿ ಉಪ ತಹಶೀಲ್ದಾರ್ ಕೊರಗ ಬಿಲ್ಲವ ಅವರಿಗೆ ಸಲ್ಲಿಸಲಾಯಿತು. 
ಚಿತ್ರ: 1702ಎಚ್ಎಂಡಿ1ಇ
ವರದಿ: ಚಂದ್ರ ಕೆ. ಹೆಮ್ಮಾಡಿ. ಚಿತ್ರ: ಸುಜಿ ವಂಡ್ಸೆ. 


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com