ಕೊಳೂರು ಕ್ರಾಸ್, ಬಸವನಮಕ್ಕಿ ಹಾಗೂ ಬೆಳ್ಳಿಗದ್ದೆ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ


ಕುಂದಾಪುರ: ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳೂರು ಕ್ರಾಸ್, ಬಸವನಮಕ್ಕಿ ಹಾಗೂ ಬೆಳ್ಳಿಗದ್ದೆ ಗ್ರಾಮಸ್ಥರು ಮುಂಬರುವ ವಿಧಾನಸಭೆ, ಸ್ಥಳೀಯಾಡಳಿತ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.
   ಚುನಾವಣೆ ಬಹಿಷ್ಕಾರದ ಬ್ಯಾನರ್‌ನ್ನು ಈಗಾಗಲೇ ಗ್ರಾಮದ ಪ್ರವೇಶ ಹಾದಿಯಲ್ಲಿ ತೂಗುಹಾಕಿದ್ದಾರೆ. ಕಲ್ಲುಗಣಿಗಾರಿಕೆಯಿಂದ ಈಗಾಗಲೇ ಏದುಸಿರು ಬಿಡುತ್ತಿರುವ ಇಲ್ಲಿಯ ಗ್ರಾಮಸ್ಥರು ಕಳೆದ 50 ವರ್ಷಗಳಿಂದ ರಸ್ತೆ ನಿರ್ಮಾಣಕ್ಕೆ ಮಾಡಿಕೊಂಡ ಮನವಿಗೆ ಸ್ಪಂದನ ದೊರೆಯದೆ ಇರುವುದರಿಂದ ಈ ತೀರ್ಮಾನಕ್ಕೆ ಬಂದಿದ್ದಾರೆ.
       ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಇಲ್ಲಿ ಸಾವಿರಕ್ಕೂ ಅಕ ಜನಸಂಖ್ಯೆ ಇದೆ. ಪರಿಶಿಷ್ಟ ಜಾತಿ, ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಕ್ಲಾಡಿ ಮತ್ತು ನೂಜಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಾದಿ ಸ್ವಾತಂತ್ರ್ಯ ದೊರೆತು 65 ವರ್ಷಗಳ ನಂತರವೂ ಉದ್ಧಾರವಾಗದ ಕಾರಣ ಜನರು ಬೇಸತ್ತಿದ್ದಾರೆ. ಸರಿ ಸುಮಾರು ಎರಡೂವರೆ ಕಿ.ಮೀ. ಉದ್ದದ ಸಂಪರ್ಕ ಹಾದಿಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಇಲ್ಲಿಗೆ ಬಸ್ ಸೇರಿದಂತೆ ಯಾವುದೇ ಘನ ವಾಹನ ಓಡಾಟ ನಡೆಸುತ್ತಿಲ್ಲ. ಶಾಲೆ ಮಕ್ಕಳು ಕಾಲ್ನಡಿಗೆಯಲ್ಲೇ ಹಕ್ಲಾಡಿ ಶಾಲೆಗೆ ಹೋಗಬೇಕು. ಕೃಷಿ ಕೂಲಿ ಕಾರ್ಮಿಕರು, ಕಾರ್ಖಾನೆ ಮತ್ತು ದಿನಗೂಲಿ ಕಾರ್ಮಿಕರಿಗೂ ಸಹ ಕಾಲ್ನಡಿಗೆಯೇ ಗತಿ. ಆಸ್ಪತ್ರೆ ಸೌಲಭ್ಯವೂ ಇಲ್ಲ. ಮಳೆಗಾಲದಲ್ಲಿ ಕೆಸರುಗದ್ದೆಯಾಗುವ ಸಂಪರ್ಕ ಹಾದಿ ಬೇಸಿಗೆಯಲ್ಲಿ ಧೂಳುಮಯ. ಅನಾರೋಗ್ಯ ಪೀಡಿತರ ಬದುಕು ಅತ್ಯಂತ ದುರ್ಬರ. ಆಟೋರಿಕ್ಷಾ ಚಾಲಕರು ಗ್ರಾಮಸ್ಥರ ಸಂಕಟಕ್ಕೆ ಮರುಗಿ ಧೈರ್ಯ ಮಾಡಿ ಸಾಗುತ್ತಾರೆ ವಿನಃ ಬರಿದೇ ಆ ಹಾದಿಯಲ್ಲಿ ಓಡಾಟ ನಡೆಸಲು ಹಿಂದೇಟು ಹಾಕುತ್ತಾರೆ.
     ಈ ಗ್ರಾಮದಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಿದೆ. ಕಲ್ಲು ತುಂಬಿಸಿಕೊಳ್ಳಲೆಂದು ಹತ್ತಾರು ಲಾರಿಗಳು ದಿನನಿತ್ಯ ಇದೇ ಕಚ್ಚಾ ರಸ್ತೆಯಲ್ಲಿ ಓಡಾಟ ನಡೆಸುತ್ತವೆ. ಕಲ್ಲು ಗಣಿಗಾರಿಕೆಯ ದುಷ್ಪರಿಣಾಮ ಒಂದೆಡೆಯಾದರೆ ಕಲ್ಲು ತುಂಬಿಸಿಕೊಂಡು ಸಾಗುವ ಲಾರಿಗಳು ಎಬ್ಬಿಸುವ ಧೂಳು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದೆಲ್ಲದ್ದರಿಂದ ಬೇಸತ್ತಿರುವ ನಾಗರಿಕರು ಸುಸಜ್ಜಿತ ರಸ್ತೆ ಆಗುವ ತನಕ ಯಾವುದೇ ಚುನಾವಣೆ ಬೆಂಬಲಿಸುವುದಿಲ್ಲ. ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
     ನಿರ್ಧಾರ ಅಚಲ: ನಮಗೆ ಸಾಕಾಗಿ ಹೋಗಿದೆ. ಅರ್ಧ ಶತಮಾನದಿಂದ ರಸ್ತೆಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಪ್ರತಿ ವರ್ಷವೂ ಸ್ಥಳೀಯಾಡಳಿತದಿಂದ ಹಿಡಿದು ಮಂತ್ರಿ ಮಹೋದಯರಿಗೆ ಮನವಿ ಸಲ್ಲಿಸುತ್ತಾ ಬಂದರೂ ಯಾರೊಬ್ಬರು ರಸ್ತೆ ನಿರ್ಮಿಸಲು ಮುಂದಾಗಿಲ್ಲ. ಓಟು ಬಂದಾಗ ರಸ್ತೆ ನಿರ್ಮಿಸುವ ಭರವಸೆ ನೀಡುವ ರಾಜಕಾರಣಿಗಳು ಮತ್ತೆ ಇತ್ತ ಕಣ್ಣು ಹಾಯಿಸುತ್ತಿಲ್ಲ. ಮೂರು ಗ್ರಾಮದ 1500 ಜನರ ನಿರ್ಣಯದಂತೆ ರಸ್ತೆ ನಿರ್ಮಿಸದ ಹೊರತು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ, ಮತ ಹಾಕುವುದಿಲ್ಲ ಎಂಬ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ತೀರ್ಮಾನ ಅಚಲ ಎಂದು ಊರಿನ ಗ್ರಾಮಸ್ಥ, ಸಾಮಾಜಿಕ ಕಾರ್ಯಕರ್ತ ಅನಂತಪದ್ಮನಾಭ ಉಡುಪ ಸ್ಪಷ್ಟಪಡಿಸಿದ್ದಾರೆ.
 ವರದಿ: ಜಾನ್‌ಡಿಸೋಜ ಕುಂದಾಪುರ
 ಕೃಪೆ: ವಿಜಯ ಕರ್ನಾಟಕ

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com