ಗಂಗೊಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬಜೆಟಿನಲ್ಲಿ ಶೇ.75ರಷ್ಟು ಅನುದಾನವನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಮೀಸಲಿಟ್ಟು ಹೆಚ್ಚಿನ ಗಮನ ನೀಡುತ್ತಿವೆ ಎಂದು ಜಿ.ಪಂ. ಸದಸ್ಯ ಅನಂತ ಮೊವಾಡಿ ಹೇಳಿದರು.
ಅವರು ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಭಾರತ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಾರ್ತಾ ಇಲಾಖೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶೇಷ ಆರೋಗ್ಯ ಪ್ರಚಾರ ಶಿಬಿರ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸಮಾನತೆ ಇದ್ದಾಗ ಮಾತ್ರ ಯಶಸ್ಸು ದೊರೆಯಲು ಸಾಧ್ಯವಿದೆ. ಎಲ್ಲರೂ ಒಂದೇ ವೇದಿಕೆಯಡಿಯಲ್ಲಿ ಬಂದು ಮಾಹಿತಿ ಪಡೆದುಕೊಂಡು ಸರ್ಕಾರದ ಪ್ರಯೋಜನ ಪಡೆದುಕೊಂಡಾಗ ಮಾತ್ರ ಸಮಾನತೆಗೆ ಬೆಲೆ ದೊರೆಯಲು ಸಾಧ್ಯ. ಸಮಾಜದಲ್ಲಿನ ಅಸಮಾನತೆ ದೂರವಾಗಬೇಕಾದರೆ ಶಿಕ್ಷಣ ಹಾಗೂ ಆರೋಗ್ಯವನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ಸಾಕಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಮಾಜಿ ಮಂಡಲ ಪ್ರಧಾನ ಬಿ. ಸದಾನಂದ ಶೆಣೈ ಶುಭಾಶಂಸನೆಗೈದರು. ಸಂಪನ್ಮೂಲ ವ್ಯಕ್ತಿಗಳಾದ ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಅಶೋಕ ಕುಮಾರ್, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ವೇತಾ, ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ. ಚಿಕ್ಕಮರಿ ಎಚ್ಐವಿ, ಏಡ್ಸ್, ಡಯಾಬಿಟೀಸ್ ಹಾಗೂ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು. ಮಂಗಳೂರಿನ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಕೆ.ಪಿ. ರಾಜೀವನ್, ಗಂಗೊಳ್ಳಿ ರೋಟರಿ ಅಧ್ಯಕ್ಷ ಅಶೋಕ ದೇವಾಡಿಗ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೋಭಾ ನಾಡಕಣರ್ ಉಪಸ್ಥಿತರಿದ್ದರು.
ಪತ್ರಕರ್ತ ಬಿ. ರಾಘವೇಂದ್ರ ಪೈ ಸ್ವಾಗತಿಸಿದರು. ಮಂಗಳೂರಿನ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ಪ್ರಚಾರ ಅಧಿಕಾರಿ ಶ್ರೀಕಾಂತ್ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿಂದ ಜಾಥಾ ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತರು, ಆರೋಗ್ಯ ಕೇಂದ್ರದ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com