ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಮದ ಶ್ರೀ ಕ್ಷೇತ್ರ ಸಿದ್ಧಿ ಶಿವದುರ್ಗೆ ನಾಗರಕ್ತೇಶ್ವರೀ ನಾಗಕನ್ನಿಕಾ ಚಾಮುಂಡೇಶ್ವರಿ, ಮಂತ್ರ ದೇವತಾ ಟೆಂಪಲ್ ಟ್ರಸ್ಟ್, ಶ್ರೀ ಕ್ಷೇತ್ರ ಕರ್ಕಿಬೈಲಿನಲ್ಲಿ ಕ್ಷೇತ್ರದ ಸ್ಥಾಪಕ ಧರ್ಮದರ್ಶಿ ಶ್ರೀ ಅಮರನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆದ ಏಕಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ನಾಗಾರಾಧನೆ ಕರಾವಳಿ ಜಿಲ್ಲೆಗಳ ವೈಶಿಷ್ಟ್ಯ. ಇದು ಇಲ್ಲಿನ ಜನರಲ್ಲಿ ನಂಬಿಕೆ, ಭಕ್ತಿ ಶ್ರದ್ಧೆಯನ್ನು ವೃದ್ಧಿಸಿ ಸಕಲ ಸನ್ಮಂಗಲವನ್ನು ಉಂಟುಮಾಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ವೇ|ಮೂ| ಎಚ್. ರಾಮಚಂದ್ರ ಭಟ್, ಹಟ್ಟಿಯಂಗಡಿ ಜೈನ ದೇವಸ್ಥಾನದ ಪ್ರಧಾನ ಜೈನ ಪುರೋಹಿತ ಎಸ್. ಚಂದ್ರ ರಾಜೇಂದ್ರ ಅರಸು, ಪಾತ್ರಿಗಳಾದ ಶಂಕರ ಪೈ ನೇರಳಕಟ್ಟೆ ತಾ.ಪಂ. ಸದಸ್ಯರಾದ ಶಶಿಕಲಾ ಪೂಜಾರಿ, ಸುಶೀಲಾ, ಕರ್ಕುಂಜೆ ಗ್ರಾ.ಪಂ. ಸದಸ್ಯ ಎನ್. ನರಸಿಂಹ ಪೂಜಾರಿ ಉಪಸ್ಥಿತರಿದ್ದರು.
ವೇ|ಮೂ| ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಅಂಪಾರು ಎ. ಸರ್ವೋತ್ತಮ ವೈದ್ಯ ಬಳಗದಿಂದ ಡಮರು ಸೇವೆ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಹಾ ಅನ್ನಸಂತರ್ಪಣೆ ಜರಗಿತು. ನಾಗಮೂರ್ತಿ ನಿರ್ಮಿಸಿದ ಗಣೇಶ ಆಚಾರ್ಯ ಹಾಗೂ ಜಗದೀಶ ಆಚಾರ್ಯ ಅವರನ್ನು ಗೌರವಿಸಲಾಯಿತು. ಗಣೇಶ ಗಂಗೊಳ್ಳಿ ನಿರ್ದೇಶನದ ಶ್ರೀ ಕರ್ಕಿಬೈಲು ಭಕ್ತಿ ಗಾನಮೃತ ಧ್ವನಿಸುರಳಿಯನ್ನು ಬಿಡುಗಡೆಗೊಳಿಸಲಾಯಿತು.
ಪ್ರಾಧ್ಯಾಪಕ ರಾಮ ದೇವಾಡಿಗ ಸ್ವಾಗತಿಸಿ, ಶರತ್ ಕುಮಾರ್ ಶೆಟ್ಟಿ ವಂದಿಸಿದರು. ನಾಗರಾಜ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com