ಈ ಮಾರ್ಗದಲ್ಲಿ ತಕ್ಕಮಟ್ಟಿಗೆ ತೇಪೆ ಕಾರ್ಯವೂ ನಡೆದಿಲ್ಲವಾದ್ದರಿಂದ ಅಲ್ಲಲ್ಲಿ ಬಾಯಿತೆರೆದಿರುವ ಹೊಂಡಗಳಿಂದ ಪ್ರಯಾಣಿಕರು ಹಾಗೂ ನಿತ್ಯಸಂಚಾರಿ ವಾಹನ ಸವಾರರು ಕಿರಿಕಿರಿ ಅನುಭವಿಸುವುದು ತಪ್ಪಿಲ್ಲ. ಅರಾಟೆ ಹೆದ್ದಾರಿ ಸೇತುವೆಯ ದುರವಸ್ಥೆಯಂತೂ ಕೊನೆಗಾಣದಾಗಿದೆ. ಅರಾಟೆಯಿಂದ ಮರವಂತೆ ತನಕ ಹೆದ್ದಾರಿ ಡಾಮರೀಕರಣವನ್ನಾದರೂ ನಡೆಸಿದ್ದಲ್ಲಿ ಪ್ರಯಾಣಿಕರ ಗೋಳನ್ನು ಕೊಂಚ ಪರಿಹರಿಸಬಹುದಿತ್ತು ಎಂಬುದು ನಾಗರಿಕರ ಅನಿಸಿಕೆ.
ತಲ್ಲೂರಿನಿಂದ ಹೆಮ್ಮಾಡಿ-ಮುವತ್ತುಮುಡಿ ತನಕ ನಡೆಸಲಾದ ಹೆದ್ದಾರಿ ಮರುಡಾಮರೀಕರಣ ಕಾಮಗಾರಿ ತೀರಾ ಕಳಪೆಯಾಗಿರುವ ವಾಸ್ತವಸತ್ಯದ ನಡುವೆ ಇಲಾಖೆ ಕಾಟಾಚಾರಕ್ಕೆಂಬಂತೆ ಕಾಮಗಾರಿ ನಡೆಸಿ ಕೈತೊಳೆದುಕೊಳ್ಳಲು ಹವಣಿಸುತ್ತಿರಬಹುದೇ ಎಂಬ ಅನುಮಾನವೆದ್ದಿದೆ. ಆತಂಕದ ವಿಚಾರವೆಂದರೆ ಅರಾಟೆಯಿಂದ ಮರವಂತೆ ಕಡಲತೀರ, ಕೇಶವ ಬೊಬ್ಬರ್ಯ ನಿಲ್ದಾಣ ಪರಿಸರ ಯಾವತ್ತೂ ಅಪಘಾತದ ತಾಣವಾಗಿ ಕುಖ್ಯಾತವಾಗಿದೆ. ಪೋಲೀಸ್ ಇಲಾಖೆಯವರು ಇಲ್ಲಿನ ಮಾರ್ಗದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಬ್ಯಾನರುಗಳನ್ನು ಹಾಕಿಕೊಂಡು ಜನಜಾಗೃತಿಯನ್ನೇನೋ ನಡೆಸುತ್ತಿದ್ದಾರೆ. ಆದರೆ ಈ ಹೆದ್ದಾರಿ ಮಾರ್ಗ ಮಾತ್ರ ಅಪಾಯಕಾರಿ ಅಡ್ಡವಾಗಿದ್ದು, ಲೋಕೋಪಯೋಗಿ ಇಲಾಖೆಯ ಬೇಜವಾಬ್ದಾರಿತನವನ್ನು ನಿತ್ಯವೂ ಅಣಕಿಸುತ್ತಿದೆ.
ಅರಾಟೆ-ಮರವಂತೆ ಹೆದ್ದಾರಿ ಮರುಡಾಮರೀಕರಣ ಯಾಕಾಗುತ್ತಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಸೂಕ್ತ ಉತ್ತರವನ್ನು ಒದಗಿಸುವ ಮೂಲಕ ಸೂಕ್ತ ಕ್ರಮಕ್ಕೆ ಲೋಕೋಪಯೋಗಿ ಇಲಾಖಾಧಿಕಾರಿಗಳು ಮುಂದಾಗಬೇಕು. ಇಲ್ಲವೇ ಈ ಪರಿಸರದಲ್ಲಿನ ಆಕ್ರೋಶಿತ ಶಾಲಾ-ಕಾಲೇಜು ವಿದ್ಯಾಥರ್ಿಗಳು, ಕಾರ್ಮಿಕರು ಸೇರಿದಂತೆ ನಿತ್ಯಸಂಚಾರಿಗಳು ಮತ್ತು ವಾಹನಸವಾರರ ಪ್ರತಿಭಟನೆಯನ್ನು ಎದುರಿಸಲು ಇಲಾಖೆ ಸಿದ್ಧವಾಗಬೇಕು.
ಚಿತ್ರ ವರದಿ: ಚಂದ್ರ ಕೆ. ಹೆಮ್ಮಾಡಿ
ಕುಂದಾಪ್ರ ಡಾಟ್ ಕಾಂ - editor@kundapra.com