ಶಿರೂರು: ಕೊಂಕಣಿ ಭಾಷೆ ಮಾತನಾಡುವ ಎಲ್ಲ ಜನಾಂಗಗಳ ಮಾತನಾಡುವ ಶೈಲಿ ಭಿನ್ನವಾಗಿದ್ದು, ವೈವಿಧ್ಯತೆಯನ್ನು ಹೊಂದಿದೆ. ಮನುಷ್ಯನ ಬದುಕಿನ ಕಲ್ಪನೆ ಬದಲಾದಂತೆ ಭಾಷೆಯ ಬದಲಾವಣೆಯಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶಿರೂರಿನ ಕರಿಕಟ್ಟೆಯ ಶ್ರೀ ದುರ್ಗಾಂಬಿಕಾ ಸಭಾಭವನದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ಮೇಸ್ತ ಕಲಾ ತಂಡ ಶಿರೂರು ಶನಿವಾರ ಆಯೋಜಿಸಿದ್ದ ಕೊಂಕಣಿ ಭಾರತ್-2013 ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ ಮಾತನಾಡಿ, ಕೊಂಕಣಿ ಮಾತನಾಡುವ 3 ಧರ್ಮೀಯರ 41 ಸಮುದಾಯಗಳಿದ್ದು, ನಮ್ಮ ದೇವರು, ಧರ್ಮ ಬೇರೆ ಬೇರೆಯಾದರೂ, ಮಾನವೀಯತೆಯ ಧರ್ಮವೇ ಶ್ರೇಷ್ಠ. ಕೊಂಕಣಿಯೇ ನಮಗೆ ಮಾತೃಭಾಷೆ. ಕೊಂಕಣಿ ಮಾತನಾಡುವ ಸಮುದಾಯದಲ್ಲಿ ಒಗ್ಗಟ್ಟಿರಬೇಕು ಎಂದರು.
ಕೊಂಕಣಿ ಅಕಾಡೆಮಿ ಇರುವವರೆಗೆ ನಿಮ್ಮ ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ನೀಡಲಾಗುವುದು. ಮಕ್ಕಳಿಗೆ ಕೊಂಕಣಿ ಭಾಷೆಯ ಸವಿಯನ್ನು ಉಣಿಸುವುದರೊಂದಿಗೆ ಮಾತೃಭಾಷೆಯನ್ನು ಉಳಿಸಿ-ಬೆಳೆಸಬೇಕು. ಹಿಂದುಳಿದ 28 ಕೊಂಕಣಿ ಭಾಷೆ ಮಾತನಾಡುವ ಪಂಗಡದ ನಾಲ್ಕು ಸಾವಿರ ಜನರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಅಕಾಡೆಮಿ ಮಾಡಿದೆ ಎಂದು ಅವರು ತಿಳಿಸಿದರು.
ಶಿರೂರು ಗ್ರಾ.ಪಂ. ಅಧ್ಯಕ್ಷ ರಾಮು ಎ. ಮೇಸ್ತ ಉತ್ಸವ ಉದ್ಘಾಟಿಸಿದರು. ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ, ಶ್ರೀ ದುರ್ಗಾಂಬಿಕಾ ಸೇವಾಸಂಘ ಅಧ್ಯಕ್ಷ ರಾಮಚಂದ್ರ ಬಿ. ಶಿರೂರ್ಕರ್, ದೇವಿದಾಸ ಆರ್.ಎಂ., ವೌಲಾನಾ ಬಾರಿಸಲ್ಲಾ ಇಸ್ಮಾಯಿಲ್ ನ್ವ, ನಾಟಿ ವೈದ್ಯ ಕುಪ್ಪ ಮರಾಠಿ, ಮದ್ದುಗುಡ್ಡೆ ಜಟ್ಟೀಗೇಶ್ವರ ದೇವಸ್ಥಾನದ ಅಧ್ಯಕ್ಷ ವಸಂತ ಮೇಸ್ತ, ಉದ್ಯಮಿ ಮೀರಾನ್ ಸಾಹೇಬ್, ಮೋಹನ ರೇವಣ್ಕರ್, ಹೊನ್ನಾವರ ಶಾರದಾಂಬಾ ದೇವಸ್ಥಾನದ ಆರ್.ಜೆ. ಮೇಸ್ತ, ಡಾಂಗಿ ಜಿಪ್ರಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಕನ್ನಡ ಚಲನಚಿತ್ರ ನಟ ಮನ್ದಿಪ್ ರಾಯ್ ಅವರನ್ನು ಸನ್ಮಾನಿಸಲಾಯಿತು. ಜೈ ಕೊಂಕಣಿ ಅಧ್ಯಕ್ಷ ಯು.ಎಸ್. ಶೆಣೈ ಅವರಿಗೆ ಕೊಂಕಣಿ ನಕ್ಷತ್ರ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ರಂಗಕರ್ಮಿ ರವೀಂದ್ರ ಕಿಣಿ, ಉದ್ಯಮಿ ಶಂಕರ ಡಿ. ಮೇಸ್ತ, ದಫ್ ಕಮಿಟಿಯ ಮಾಮ್ದು ಯಾಕೂಬ್ ಕೊಂಕಣಿಶ್ರೀ ಪ್ರಶಸ್ತಿ ಪಡೆದರು.
ಕಲಾ ತಂಡದ ಅಧ್ಯಕ್ಷ ರಾಮನಾಥ ಪಿ. ಮೇಸ್ತ ಸ್ವಾಗತಿಸಿದರು. ಅಕಾಡೆಮಿಯ ಸಂಚಾಲಕ ಸದಸ್ಯ ಓಂಗಣೇಶ ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಡಾ. ಬಿ. ದೇವಿದಾಸ್ ಪೈ ವಂದಿಸಿದರು.