ಅಮಾಸೆಬೈಲು: ರಾಜ್ಯದ ರೈತರಲ್ಲಿ ಶೇ 98ರಷ್ಟು ಮಧ್ಯಮ ವರ್ಗದ ಭೂಮಾಲೀಕ ರೈತರಾಗಿದ್ದಾರೆ. ಇವರಲ್ಲಿ ಬಹುತೇಕರು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಕಳೆದುಕೊಂಡಿದ್ದು, ಸರ್ಕಾರಗಳು ಹಮ್ಮಿಕೊಂಡ ರೈತಪರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಅಧಿಕಾರಿಗಳು ಮತ್ತು ಜಪ್ರತಿನಿಧಿಗಳಿಂದ ಆಗಬೇಕಾಗಿದೆ ಎಂದು ರಾಜ್ಯ 3ನೇ ಹಣಕಾಸು ಅನುಷ್ಠಾನ ಸಮಿತಿ ಕಾರ್ಯಪಡೆ ಅಧ್ಯಕ್ಷ ಎ.ಜಿ.ಕೊಡ್ಗಿ ಹೇಳಿದರು.
ಅಮಾಸೆಬೈಲುವಿನಲ್ಲಿ ನಡೆದ ಜಲಾನಯನ ಮೇಳ- 2013ನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಕೃಷಿ ಉಪಯೋಗಕ್ಕೆ ಖುಮ್ಕಿ ಹಕ್ಕು ಮಂಜೂರಾತಿ ಅನಿವಾರ್ಯವಾಗಿ ಆಗಬೇಕಾಗಿದೆ. ರೈತರ ಹಕ್ಕುಗಳನ್ನು ಸರ್ಕಾರ ನೀಡಬೇಕು ಎಂದರು.
ಕುಂದಾಪುರ ಜಲಾನಯನ ಅಭಿವೃದ್ಧಿ ಇಲಾಖೆ, ಸಮಗ್ರ ಜಲಾ ನಯನ ನಿರ್ವಹಣಾ ಕಾರ್ಯಕ್ರಮದಡಿ ನಡೆದ ಈ ಕಾರ್ಯಕ್ರಮದಲ್ಲಿ ಹಾಲಾಡಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ರಶ್ವಥ್ ಕುಮಾರ್ ಶೆಟ್ಟಿ ವಸ್ತು ಪ್ರದರ್ಶನ ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ 16 ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ವಿತರಿಸಿ, ಜಲಾನಯನ ಇಲಾಖೆ ಕಾರ್ಯಯೋಜನೆ ಕೈಪಿಡಿ ಅನಾವರಣಗೊಳಿಸಿದರು.
ಅಮಾಸೆಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಎಸ್. ಶೆಟ್ಟಿ, ಅಮಾಸೆಬೈಲು ತಾಲ್ಲೂಕು ಪಂಚಾಯಿತಿ ಸದಸ್ಯ ನವೀನಚಂದ್ರ ಶೆಟ್ಟಿ, ವಸುಂಧರ ಹೆಗ್ಡೆ ತೊಂಬತ್ತು ಮಾತನಾಡಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ ಕುಮಾರ ಕೊಡ್ಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬೆಳ್ವೆ ಶಿವರಾಮ ಪೂಜಾರಿ, ಗುಲಾಬಿ ಪೂಜಾರ್ತಿ, ಮಡಾಮಕ್ಕಿ ಸುಶೀಲಾ ಪೂಜಾರಿ, ಜಿಲ್ಲಾ ಜಲಾನಯನ ಅಧಿಕಾರಿ ಅಶೋಕ ವಿ.ಎಸ್, ತಾಲ್ಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿ ಸಿ.ರಘುರಾಮ ಶೆಟ್ಟಿ, ಅಮಾಸೆಬೈಲು ಶಾಲೆ ಮುಖ್ಯ ಶಿಕ್ಷಕ ಜಯಂತ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ನಂತರ ತನಕ ಸಮಗ್ರ ಜಲಾನಯನ ನಿರ್ವಹಣೆ ಕಾರ್ಯಕ್ರಮಗಳ ಕುರಿತು ವಿಚಾರ ಗೋಷ್ಠಿಗಳು, ಆದಾಯ ಉತ್ಪನ್ನ ಚಟುವಟಿಕೆ, ಉತ್ಪಾದನಾ ಪದ್ಧತಿ ಮತ್ತು ಕಿರು ಉದ್ಯಮ. ಇತರ ಇಲಾಖೆಗಳಿಂದ ಇಲಾಖಾ ಕಾರ್ಯಕ್ರಮ ಹಾಗೂ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿ ವಿನಿಮಯ ಹಾಗೂ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇಲಾಖೆಗಳ ವತಿಯಿಂದ ವಸ್ತು ಪ್ರದರ್ಶನ ನಡೆಯಿತು.