ನಾವುಂದ: ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಉಡುಪಿಯ ಆದರ್ಶ ಆಸ್ಪತ್ರೆ ಸಹಯೋಗದಲ್ಲಿ ನಾವುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ 10ರಂದು ಬೃಹತ್ ಆರೋಗ್ಯ ಮೇಳ ಆಯೋಜಿಸಲಾಗಿದೆ.
ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯುವ ಮೇಳವನ್ನು ಟ್ರಸ್ಟ್ನ ಆಡಳಿತ ಟ್ರಸ್ಟಿ ಎಂ.ಎನ್. ರಾಜೇಂದ್ರಕುಮಾರ್ ಉದ್ಘಾಟಿಸುವರು. ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್ ಮಾಹಿತಿ ನೀಡುವರು.
ಮೇಳದಲ್ಲಿ ಮಧುಮೇಹ, ಹೃದ್ರೋಗ, ನರರೋಗ, ಎಲುಬು ಕೀಲು ಕಾಯಿಲೆ, ಪ್ರಸೂತಿ ಮತ್ತು ಸ್ತ್ರೀರೋಗ, ಶಸ್ತ್ರ ಚಿಕಿತ್ಸೆ ವಿಭಾಗದ ಪರಿಣತ ವೈದ್ಯರು ಆರೋಗ್ಯ ತಪಾಸಣೆ ನಡೆಸುವರು. ರಕ್ತದ ಸಕ್ಕರೆ ಮತ್ತು ಕೊಬ್ಬಿನ ಅಂಶ ಪರೀಕ್ಷೆ, ರಕ್ತ ವರ್ಗೀಕರಣ, ಇಸಿಜಿ, ಹೃದಯದ ಸ್ಕ್ಯಾನಿಂಗ್, ಟಿಎಂಟಿ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು.
ಅಗತ್ಯವೆಂದು ಕಂಡುಬಂದ ರೋಗಿಗಳಿಗೆ ಹೃದಯದ ಆಂಜಿಯೊಗ್ರಾಮ್ ಪರೀಕ್ಷೆ, ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು, ಖ್ಯಾತ ನರರೋಗ ಶಸ್ತ್ರ ಚಿಕಿತ್ಸಾ ತಜ್ಞ ಪ್ರೊ.ಎ.ರಾಜಾ ನೇತೃತ್ವದ ತಂಡದಿಂದ ಮಿದುಳು, ಬೆನ್ನುಹುರಿಯ ತಪಾಸಣೆ ಮತ್ತು ಅಗತ್ಯವೆನಿಸಿದಲ್ಲಿ ಶಸ್ತ್ರ ಚಿಕಿತ್ಸೆಯನ್ನು ರಿಯಾಯಿತಿಯಲ್ಲಿ ನಡೆಸಲಾಗುವುದು. ಫಿಟ್ಸ್ ಹಾಗೂ ನರರೋಗ ಸಂಬಂಧಿ ಕಾಯಿಲೆಗಳಿಗೆ ನರರೋಗ ತಜ್ಞ ಡಾ.ಕೆ.ಸಿ.ರಕ್ಷಿತ್ ಅವರಿಂದ ತಪಾಸಣೆ ಮತ್ತು ಅಗತ್ಯವೆನಿಸಿದಲ್ಲಿ ಇಇಜಿ, ಇಎಂಜಿ, ಎನ್ಸಿವಿ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು.
ಎಲ್ಲ ರೀತಿಯ ಸಾಮಾನ್ಯ ವೈದ್ಯಕೀಯ ಸಮಸ್ಯೆಗಳು, ಶಸ್ತ್ರಚಿಕಿತ್ಸೆ ಸಂಬಂಧಿ ರೋಗಗಳು, ಎಲುಬು-ಕೀಲು ರೋಗಗಳು ಮತ್ತು ಸ್ತ್ರೀರೋಗಗಳಿಗೆ ತಜ್ಞ ವೈದ್ಯರಿಂದ ಸಲಹೆ, ಚಿಕಿತ್ಸೆ ಒದಗಿಸಲಾಗುವುದು. ಆಧುನಿಕ ಜೀವನ ಶೈಲಿ ಹಾಗೂ ಕಾಯಿಲೆಗಳ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಏರ್ಪಡಿಸುವುದಲ್ಲದೆ, ಲಭ್ಯವಿರುವ ಔಷದಿಗಳನ್ನು ಉಚಿತವಾಗಿ ನೀಡಲಾಗುವುದು.
ವಿವಿಧ ವಿಭಾಗಗಳ ತಜ್ಞ ವೈದ್ಯರಾದ ಡಾ.ಮೋಹನದಾಸ ಶೆಟ್ಟಿ, ಡಾ.ವೈ.ಸುದರ್ಶನ ರಾವ್, ಡಾ.ಶ್ರೀಕಾಂತ್, ಡಾ.ಕಿರಣ್, ಡಾ.ಜಸ್ಪ್ರೀಕ್ ಸಿಂಗ್ ದಿಲ್, ಡಾ.ದಮಯಂತಿ, ಡಾ.ಅನುರಾಗ್ ಗುಪ್ತ, ಡಾ. ಉದಯಕುಮಾರ ಪ್ರಭು, ಡಾ. ಶೈಲಾ ನಾಯಕ್ ಭಾಗವಹಿಸಲಿದ್ದು, ಈ ಶಿಬಿರದ ಸದುಪಯೋಗ ಪಡೆಯಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಮತ್ತು ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಮನವಿ ಮಾಡಿದ್ದಾರೆ.