ಕಪ್ಪುಪಟ್ಟಿ ಧರಿಸಿ ಅತಿಥಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರು


ಕುಂದಾಪುರ: ಬಾಕಿ ವೇತನ ಪಾವತಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ತರಗತಿ ಬಹಿಷ್ಕಾರ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ. ಶುಕ್ರವಾರದಿಂದ  ಎಲ್ಲಾ ಅತಿಥಿ ಉಪನ್ಯಾಸರು ಕಪ್ಪು ಪಟ್ಟಿ ಧರಿಸಿ ತರಗತಿಯಲ್ಲಿ ಎಂದಿನಂತೆ ಉಪನ್ಯಾಸ ನೀಡಲಿದ್ದಾರೆ ಎಂದು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ಮತ್ತು ಅತಿಥಿ ಉಪನ್ಯಾಸಕರು ತಿಳಿಸಿದ್ದಾರೆ.
        ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಡುಪಿ, ಕೊಡಗು, ಮಂಗಳೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಕಳೆದ ನಾಲ್ಕು ದಿನಗಳಿಂದ ತರಗತಿ ಬಹಿಷ್ಕರಿಸಿದ್ದು, ಬುಧವಾರ ಜಿಲ್ಲೆಯ ಎಲ್ಲಾ ಅತಿಥಿ ಉಪನ್ಯಾಸಕರು ಕೋಟೇಶ್ವರದಲ್ಲಿ ಸಭೆ ಸೇರಿ ವೇತನ ಬಾಕಿ, ಕನಿಷ್ಠ ವೇತನ ಹೆಚ್ಚಳ, ಸೇವೆಯ ಅವಧಿಯನ್ನು ಪರಿಗಣಿಸಿ ಕಾಯಾಮಾತಿ ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.
        ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದಾಗ, ಬಹಳ ಹಿಂದಿನಿಂದಲೂ ಇದ್ದ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ  ಸ್ಪಷ್ಟ ರೂಪ ನೀಡಿ ಮುಂದಿನ 20 ದಿವಸದೊಳಗೆ ಸೂಕ್ತವಾದ ಪರಿಹಾರ ನೀಡುವುದಲ್ಲದೆ, ಬಜೆಟ್‌ನಲ್ಲಿಯೂ ಪ್ರಸ್ತಾಪಿಸಲಾಗುವುದು. ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಕೂಡಲೇ ತರಗತಿ ಬಹಿಷ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರಲ್ಲಿ ಮನವಿಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
        ನಮ್ಮ ನ್ಯಾಯಯುತವಾದ ಬೇಡಿಕೆಯ ಮನವಿಯನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಅದು ಈಡೇರುವ ತನಕ ಕಪ್ಪು ಪಟ್ಟಿ ಧರಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಠಪ್ರವಚನ ನಡೆಸಲಾಗುವುದು. ಸಚಿವರು ನೀಡಿದ ಗಡುವಿನೊಳಗೆ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮತ್ತೆ ಜಿಲ್ಲಾ ಸಂಘಗಳನ್ನು ರಾಜ್ಯ ಮಟ್ಟದಲ್ಲಿ ಸಂಘಟಿಸಿ ರಾಜ್ಯಾದ್ಯಂತ ಕಾಲೇಜಿನಲ್ಲಿ ಮತ್ತೆ ತರಗತಿ ಬಹಿಷ್ಕರಿಸಿ, ವಿ.ವಿ. ಮಟ್ಟದ ಪರೀಕ್ಷಾ ಮೌಲ್ಯಮಾಪನವನ್ನು ಸಾಮೂಹಿಕವಾಗಿ ಬಹಿಷ್ಕರಿಸುವುದಲ್ಲದೆ ವಿಧಾನಸೌಧದ ಮುಂದೆ ಉಗ್ರ ಚಳುವಳಿ ನಡೆಸಲಾಗುವುದು ಎಂದು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ಮತ್ತು ಅತಿಥಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com