ತ್ರಾಸಿ: ದೇಶದ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಹಾಗೂ ಎಲ್ಲರ ಪ್ರಗತಿಗೆ ಕಾಂಗ್ರೆಸ್ ನೀಡಿದಷ್ಟು ಕೊಡುಗೆಗಳನ್ನು ಇನ್ನಾವುದೇ ಪಕ್ಷ ನೀಡಿಲ್ಲ. ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳ ಅಪ ಪ್ರಚಾರದ ನಡುವೆ ಹೊಸ ತಲೆಮಾರಿನವರು ಇದನ್ನು ಅರಿಯುವ ಗೋಜಿಗೆ ಹೋಗುವುದಿಲ್ಲ. ಚುನಾವಣೆ ಗಳಲ್ಲಿನ ಅದರ ಹಿನ್ನಡೆಗೆ ಇದು ಪ್ರಬಲ ಕಾರಣ. ಆದ್ದರಿಂದ ಯುವಕರಿಗೆ ಅದನ್ನು ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಮಾಜಿ ಸಚಿವೆ ಸುಮಾ ವಸಂತ್ ಹೇಳಿದರು.
ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಭಾನುವಾರ ತ್ರಾಸಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ನಾರಾಯಣ ಸ್ವಾಮಿ ಮಾತನಾಡಿ, ಸ್ವಾತಂತ್ರ್ಯಾನಂತರ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಚಿಂತನೆಗಳನ್ನು ವಿವಿಧ ಕಾನೂನುಗಳ ಮೂಲಕ ಕಾರ್ಯರೂಪಕ್ಕೆ ತಂದು ದೀನ ದಲಿತರ, ಬಡವರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ಗಳಿಗೆ ತಡೆಯೊಡ್ಡಿದೆ. ಸಮಾನತೆ ಒದಗಿಸಿದೆ. ಅವರಿಗೆ ಶಿಕ್ಷಣಾವಕಾಶ ಸೃಷ್ಟಿಸಿ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಅವಕಾಶ, ನೆರವು ನೀಡಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ, ಸಂಸದ ಕೆ. ಜಯಪ್ರಕಾಶ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಮಾತನಾಡಿದರು.
ಉಭಯ ಬ್ಲಾಕ್ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧ್ಯಕ್ಷರಾದ ಸತೀಶ ಕೆ.ನಾಡ, ರಾಜು ಸೌಕೂರು, ಭೋಜ ನಾಯ್ಕ, ವೆಂಕಪ್ಪ ನಾಯ್ಕ ಕೊಡ್ಲಾಡಿ ಮತ್ತು ಪದಾಧಿ ಕಾರಿಗಳ ಪದಪ್ರದಾನ ನಡೆಯಿತು.
ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಸ್. ನಾರಾಯಣ, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಸುರೇಶ ನಾಯ್ಕ, ಬ್ಲಾಕ್ ಅಧ್ಯಕ್ಷರಾದ ಕೆ. ರಮೇಶ ಗಾಣಿಗ, ಎಸ್. ಸಂಜೀವ ಶೆಟ್ಟಿ, ಕೆಪಿಸಿಸಿ ಸದಸ್ಯ ಎಚ್. ಮಂಜಯ್ಯ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಎಸ್. ರಾಜು ಪೂಜಾರಿ, ಅನಂತ ಮೊವಾಡಿ, ವಿ. ಜಯರಾಮ ಶೆಟ್ಟಿ, ಪ್ರಸನ್ನ ಕುಮಾರ ಶೆಟ್ಟಿ, ಚಂದ್ರಕಾಂತ್, ಸುಬ್ರಹ್ಮಣ್ಯ ಪೂಜಾರಿ ಇದ್ದರು.
ರವೀಂದ್ರ ಸೌಕೂರು ಸ್ವಾಗತಿಸಿದರು. ವಕೀಲ ಯೋಗೇಂದ್ರ ನಾಯ್ಕ ಕೊಡ್ಲಾಡಿ ಪ್ರಸ್ತಾವನೆಗೈದರು. ಶೇಖರ ಸೌಕೂರು ವಂದಿಸಿದರು. ಪ್ರಸನ್ನ ಶೆಟ್ಟಿ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com