ಬೈಂದೂರು: ತಾಲೂಕು ಘೋಷಣೆಯಾದ ಬಳಿಕ ಕೆಲವು ಪಟ್ಟ ಭದ್ರಹಿತಾಸಕ್ತಿಯ ಹಿನ್ನಲೆಯಲ್ಲಿ ಹೇಳಿಕೆ ನೀಡುವುದು ಮತ್ತು ಬೈಂದೂರು ತಾಲೂಕು ರಚನೆಯ ಬಗ್ಗೆ ಗೊಂದಲ ಉಂಟುಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ಬೈಂದೂರು ತಾಲೂಕು ರಚನಾ ಮತ್ತು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ಹೇಳಿದರು.
ಅವರು ಬೈಂದೂರು ರೋಟರಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ವಂಡ್ಸೆ ತಾಲೂಕು ರಚನೆ ಅಥವಾ ಇನ್ನಿತರ ವಿಚಾರಗಳ ಬಗ್ಗೆ ನಮ್ಮ ಅಭ್ಯಂತರವಿಲ್ಲ ಆದರೆ ಬೈಂದೂರು ತಾಲೂಕು ಘೋಷಣೆಗೆ ಸಂಭ್ರಮಿಸುವುದರ ಅವಶ್ಯಕತೆಯಿಲ್ಲ ಎನ್ನುವ ಹೇಳಿಕೆಯ ಮೂಲಕ ಬೈಂದೂರು ತಾಲೂಕು ಘೋಷಣೆ ಬಗ್ಗೆ ಅಸಮಧಾನವಾದ ತುಡಿತ ವ್ಯಕ್ತಪಡಿಸುವುದು ಸಮಂಜಸವಲ್ಲ. ಬೈಂದೂರು ತಾಲೂಕು ರಚನೆಗಾಗಿ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದ್ದು 26 ವರ್ಷಗಳ ಹಿಂದೆಯೇ ಸರಕಾರದ ನಿಯೋಗ ಬೈಂದೂರು ತಾಲೂಕು ಪ್ರಸ್ತಾಪ ತೆಗೆದುಕೊಂಡ ಹಿನ್ನೆಲೆಯಿದೆ ಎಂದರು.
ಬೈಂದೂರು ತಾಲೂಕು ರಚನೆ ಬಗ್ಗೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಹಲವಾರು ಸಭೆಗಳು ನಡೆದಿದೆ. 1987ರಲ್ಲಿ ಉಡುಪಿ ಜಿಲ್ಲಾ ಪುನರ್ ವಿಂಗಡನೆ ಹಾಗೂ ತಾಲೂಕು ಪುನರ್ ರಚನೆ ಸಮಿತಿಗಳಾದ ಹುಂಡೇಕರ್, ಗದ್ದಿಗೌಡರ ವರದಿಯಲ್ಲಿ ಬೈಂದೂರು, ಬ್ರಹ್ಮಾವರ, ಮೂಡಬಿದಿರೆ ತಾಲೂಕುಗಳ ಬಗ್ಗೆ ಪ್ರಸ್ತಾಪ ನೀಡಿದೆ. 1997ರಲ್ಲಿ ಉಡುಪಿ ಜಿಲ್ಲೆಯಾಗುವ ಮುಂಚೆಯೇ ತಾಲೂಕು ಪ್ರಕ್ರಿಯೆಗಳು ನಡೆಯಬೇಕಿತ್ತು. ಆದರೆ ಕುಂದಾಪುರದ ಕೆಲವೇ ವ್ಯಕ್ತಿಗಳು ವೈಯಕ್ತಿಕ ಹಿತದೃಷ್ಟಿಯಿಂದ ಎಮ್. ಬಿ. ಪ್ರಕಾಶ್ ವರದಿಯಲ್ಲಿನ ಬೈಂದೂರು ತಾಲೂಕು ವಿಚಾರದ ಬಗ್ಗೆ ತಪ್ಪು ಗ್ರಹಿಕೆಯನ್ನು ಮುಂದಿಟ್ಟುಕೊಂಡು ದಿಕ್ಕು ತಪ್ಪುಸುವ ಪ್ರಯತ್ನ ನಡೆಯುತ್ತಿದೆ. ಹಕ್ಕುಗಳಿಗಾಗಿ ಹೋರಾಟ ಮಾಡುವುದು ಸಾಮಾನ್ಯ ಆದರೆ ಇನ್ನೊಂದು ಊರಿನ ಅಭಿವೃದ್ಧಿಯನ್ನು ಪ್ರಶ್ನಿಸಿ ವಿರೋಧಕರ ಮನೋಭಾವನೆಯ ಪ್ರಕ್ರಿಯೆಗಳು ಸಾಮಾಜಿಕ ವ್ಯವಸ್ಥೆಯ ಪ್ರತ್ಯೇಕತಾ ಮನೋಭಾವನೆಯನ್ನು ಬಿಂಬಿಸಿದಂತಾಗುತ್ತದೆ ಎಂದರು.
ತಾಲೂಕು ಕೇಂದ್ರದ ಬಗ್ಗೆ ಭಿನ್ನಮತವಿಲ್ಲ. ಬೈಂದೂರಿನಲ್ಲಿ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ವಿಶೇಷ ತಹಶೀಲ್ದಾರರ ಕಛೆರಿ ಸೇರಿದಂತೆ ಹಲವು ಇಲಾಖೆಗಳ ಪ್ರಮುಖ ಕಛೇರಿಗಳನ್ನು ಹೊಂದಿದೆ. ಹೀಗಾಗಿ ತಾಲೂಕು ಕೇಂದ್ರ ಬೈಂದೂರು ಎನ್ನುವುದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಾಲೂಕು ರಚನಾ ಸಮಿತಿ ಸ್ಪಷ್ಟಪಡಿಸಿದೆ.
ತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ವಸಂತ, ಉಪಾಧ್ಯಕ್ಷ ಸುಬ್ರಾಯ ಶೇರುಗಾರ್, ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಪೂಜಾರ್ತಿ, ನಾರಾಯಣ ಹೆಗ್ಡೆ ತಗ್ಗರ್ಸೆ, ಗಣೇಶ್ ಕಾರಂತ, ಭಾಸ್ಕರ ಶೆಟ್ಟಿ, ಸದಾಶಿವ . ಡಿ, ಮಂಜುನಾಥ ಶೆಟ್ಟಿ, ಜಯಾನಂದ ಹೋಬಳಿದಾರ್ ಮುಂತಾದವರು ಹಾಜರಿದ್ದರು.
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಘೋಷಣೆ ಮಾಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಕೆ. ಲಕ್ಷ್ಮೀನಾರಾಯಣ, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಾಗೂ ಈ ಬಗ್ಗೆ ಪ್ರಯತ್ನಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಕುಂದಾಪ್ರ ಡಾಟ್ ಕಾಂ - editor@kundapra.com