ಬೈಂದೂರು: ಬಿಜೂರು ಕಂಚಿಕಾನ್ನಲ್ಲಿ ರೈಲು ಹಳಿ ಹಾದುಹೋಗುವ ರಸ್ತೆಗೆ ಮೇಲ್ಸೇತುವೆ ನಿರ್ಮಿಸುವಂತೆ ಹಾಗೂ ಮೇಲ್ಸೇತುವೆ ನಿರ್ಮಾಣವಾಗುವ ತನಕ ರೈಲ್ವೆ ಗೇಟ್ ಹಾಕುವ ಸಮಯವನ್ನು 20 ನಿಮಿಷದಿಂದ 5 ನಿಮಿಷಕ್ಕೆ ಕಡಿತಗೊಳಿಸುವಂತೆ ಆಗ್ರಹಿಸಿ ಊರ ಗ್ರಾಮಸ್ಥರು, ಬಿಜೂರು, ಉಪ್ಪುಂದ ಹಾಗೂ ನಾಯ್ಕನಕಟ್ಟೆ ರಿಕ್ಷಾ, ಚಾಲಕ-ಮಾಲಕರು ಶನಿವಾರ ಬೆಳಿಗ್ಗೆ ಕಂಚಿಕಾನ್ ರೈಲ್ವೆ ಗೇಟ್ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಜಿ.ಪಂ. ಸದಸ್ಯೆ ಗೌರಿ ದೇವಾಡಿಗ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಕೊಂಕಣ ರೈಲ್ವೆ ಭಾಗದಲ್ಲಿ ಬಹಳಷ್ಟು ರೈಲುಗಳು ಓಡಾಡುವುದರಿಂದ ರೈಲು ಹಳಿ ಹಾದು ಹೋಗುವ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾತ್ತಿದೆ, ತಾಲೂಕಿನ ಎರಡನೇ ದೊಡ್ಡ ವ್ಯವಹಾರಿಕ ಪ್ರದೇಶವಾದ ಉಪ್ಪುಂದದಿಂದ ಅನತಿ ದೂರದಲ್ಲಿರುವ ಈ ರೈಲ್ವೆ ಗೇಟ್ನಿಂದ ದಿನನಿತ್ಯ ನೂರಾರು ಬಾಹನಗಳು ಹಾಗೂ ಸಾವಿರಾರು ಜನರು ಓಡಾಡುತ್ತಿರುತ್ತಾರೆ. ಪ್ರತಿ ರೈಲಿಗೆ ಸುಮಾರು 20 ರಿಂದ 25 ನಿಮಿಷಗಳ ಕಾಲ ರೈಲ್ವೆ ಗೇಟ್ ಮುಚ್ಚಿರುತ್ತದೆ, ಪ್ರತಿದಿನ ಮೂವತ್ತೈದು ಹೆಚ್ಚು ರೈಲು ಈ ಮಾರ್ಗದ ಮೂಲಕ ಹಾದುಹೋಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ, ಕೂಲಿಕಾರರಿಗೆ, ವ್ಯಾಪಾರಸ್ಥರಿಗೆ, ನೌಕರರಿಗೆ ಮಾತ್ರವಲ್ಲದೆ ಅನಾರೋಗ್ಯ ಪೀಡಿತರಿಗೆ, ಗರ್ಭಿಣಿಯರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಈ ಗೇಟ್ನಿಂದಾಗಿ ಇತ್ತೀಚೆಗೆ 3 ಸಾವು ಸಂಭವಿಸಿದೆ, ರೈಲ್ವೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಈ ಭಾಗದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು, ಈ ಮೇಲ್ ಸೇತುವೆ ನಿರ್ಮಾಣ ವಾಗುವ ತನಕ ರೈಲ್ವೆ ಗೇಟ್ನ್ನು 5 ನಿಮಿಷ ಮಾತ್ರ ಮುಚ್ಚಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗುರುರಾಜ ಶೆಟ್ಟಿ, ವಿರೇಂದ್ರ ಶೆಟ್ಟಿ, ಗ್ರಾ.ಪಂ. ಸದಸ್ಯ ಶ್ರೀಧರ ಬಿಜೂರು, ವಾಜುರಾಜ ಶೆಟ್ಟಿ, ನಾರಾಯಣ ಶಾನುಭಾಗ ಉಪ್ರಳ್ಳಿ, ಮಂಜುನಾಥ ಶೆಟ್ಟಿ, ಜಯರಾಮ ಶೆಟ್ಟಿ, ವೀರಭದ್ರ ಶೆಟ್ಟಿ, ಗಣೇಶ ಎಲ್.ಪೂಜಾರಿ, ಗೋವಿಂದ ಪೂಜಾರಿ, ಉಮೇಶ ದೇವಾಡಿಗ, ನಾರಾಯಣ, ಮಂಜುನಾಥ, ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ರೈಲ್ವೆ ಇಂಜಿನಿಯರ್ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಅಸಿಸ್ಟೆಂಟ್ ಇಂಜಿನಿಯರ್ ರಾಜೇಶ ಪೈ, ಹಾಗೂ ಸೂಪರ್ವೈಸರ್ ವೆಂಕಟೇಶ್ ಪಟಗಾರ್ ಭೇಟಿ ನೀಡಿ, ಮನವಿ ಸ್ವೀಕರಿಸಿ ಮಾತನಾಡಿ, ದಿನನಿತ್ಯ ಒಂದು ಲಕ್ಷಕ್ಕಿಂತ ಮೇಲ್ಪಟ್ಟು ವಾಹನದಟ್ಟಣೆ ಇರುವ ಪ್ರದೇಶಕ್ಕೆ ಮಾತ್ರ ಮೇಲ್ಸೇತುವೆ ನಿರ್ಮಾಣ ಮಾಡಬಹುದು. ಇದು ಇಂಡಿಯನ್ ರೈಲ್ವೆಯ ರೂಲ್ಸ್ ಆಗಿದೆ. ಅದಕ್ಕಿಂತ ಕಡಿಮೆ ದಟ್ಟಣೆಯಿರುವ ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕಾದರೆ 50% ಅನುದಾನ ರಾಜ್ಯಸರ್ಕಾರ ಭರಿಸಿದರೆ ಉಳಿದ 50% ಇಂಡಿಯನ್ ರೈಲ್ವೆ ಭರಿಸಿ ಮೇಲ್ಸೇತುವೆ ನಿರ್ಮಾಣ ಮಾಡಬಹುದು. ನಿಮ್ಮ ಈ ಮನವಿಯನ್ನು ರಿಜಿನಲ್ ರೈಲ್ವೆ ಅಧಿಕಾರಿಗಳಿಗೆ ತಲುಪಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ಕುಂದಾಪ್ರ ಡಾಟ್ ಕಾಂ - editor@kundapra.com