ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ

ಕುಂದಾಪುರ : ಇಂದು ಅವಿಭಜಿತ ದ.ಕ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿ ಬೆಳೆದಿದ್ದರೆ ಅದರ ಹಿಂದೆ ಈ ಭಾಗದ ಸಹಕಾರಿ ಮುತ್ಸದ್ಧಿಗಳ ಸಕ್ರೀಯ ಪಾತ್ರವಿದೆ. ಭದ್ರವಾದ ತಳಹದಿಯನ್ನು ಹೊಂದಿರುವ ಸಹಕಾರ ಕ್ಷೇತ್ರವು ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕ ಜೀವನವನ್ನು ಉತ್ತಮ ಪಡಿಸುವಲ್ಲಿ ಹಾಗೂ ಸಮಾಜದಲ್ಲಿ ಸಂಪರ್ಕವನ್ನು ಬಲಗೊಳಿಸಲು ಸಹಕಾರಿ ಕ್ಷೇತ್ರ ತೀರಾ ಅಗತ್ಯವಾಗಿದೆ ಎಂದು ರಾಜ್ಯದ ಮುಜರಾಯಿ, ಬಂದರು, ಒಳನಾಡು ಜಲಸಾರಿಗೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸವಿಚ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

      ಅವರು ಭಾನುವಾರ  ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನವೀಕೃತ ಹವಾನಿಯಂತ್ರಿತ ಯಡ್ತರೆ ಮಂಜಯ್ಯ ಶೆಟ್ಟಿ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.

          ಅವಿಭಜಿತ ದಕ್ಷಿಣ ಜಿಲ್ಲೆಗಳಲ್ಲಿ ಸಹಕಾರಿ ಸಂಸ್ಥೆಗಳು ಗಮನಾರ್ಹ ಕೆಲಸ ಕಾರ್ಯ ಮಾಡಿದೆ. ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ ಆದರೆ ಆ ಸಂಸ್ಥೆಯನ್ನು ಆರೋಗ್ಯಪೂರ್ಣವಾಗಿ ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದರತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ, ದೂರಗಾಮಿ ಯೋಚನೆಗಳನ್ನು ಇಟ್ಟುಕೊಂಡು ಸಮಾಜದ ಬೆಳವಣಿಗೆಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡುವಲ್ಲಿ ಶ್ರಮಿಸಬೇಕು. ಸೇವಾ ಮನೋಭಾವದಿಂದ ಮಾಡುವ ಕೆಲಸ ಬಹಳ ಗಂಭೀರವಾದದ್ದು ಮತ್ತು ಗುರುತರ ಜವಾಬ್ದಾರಿಯಿಂದ ಕೂಡಿದೆ ಎಂದು ಅವರು ಹೇಳಿದರು.

         ಸಹಕಾರಿ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದರೂ ಸರಕಾರ ಎಲ್ಲಾ ಯೋಜನೆಗಳಿಗೆ ಪೂರ್ಣ ಪ್ರಮಾಣದ ಸಹಕಾರ ನೀಡಿದೆ. ಹೈನುಗಾರರಿಗೆ ಬೆಂಬಲ ನೀಡುವ ಉದ್ದೇಶದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ೨ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಸರಕಾರ ಈವರೆಗೆ ಪ್ರೋತ್ಸಾಹ ಧನಕ್ಕಾಗಿ ೧೧೭೯ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ೧೨೫ ತಾಲೂಕುಗಳಲ್ಲಿ ಬರಗಾಲವಿದ್ದರೂ, ರೈತರ ಬೆಂಬಲಕ್ಕೆ ನಿಲ್ಲಬೇಕಾಗಿರುವುದರಿಂದ ಮತ್ತು ರೈತರ ಬೇಡಿಕೆಗೆ ಸ್ಪಂದಿಸಿ ಸುಮಾರು ೩೫೦೦ ಕೋಟಿ ರೂ.ಗಳನ್ನು ಪ್ರಥಮ ಕಂತಿನಲ್ಲಿ ಬಿಡುಗಡೆ ಮಾಡಿದೆ ಎಂದು ಹೇಳಿದ ಅವರು, ದಿ| ಮೊಳಹಳ್ಳಿ ಶಿವರಾಯರ ಸಹಕಾರ ಚಳವಳಿಗಳ ಕಾಲ ಘಟ್ಟದಲ್ಲಿ ಆರಂಭಗೊಂಡಿರುವ ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘವು ಗಮನಾರ್ಹ ಬೆಳವಣಿಗೆ ಹೊಂದಿ, ಸದಸ್ಯರ, ಗ್ರಾಹಕರ ಬೆಂಬಲದೊಂದಿಗೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಅಭಿನಂದನಾರ್ಹವಾದುದು ಎಂದು ಹೇಳಿದರು.

                   ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಗಳಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಕ್ಷೀಣಿಸುತ್ತಿದೆ. ಜನರು ಕೃಷಿ ಚಟುವಟಿಕೆ ನಡೆಸುವುದು ದುಸ್ತರವಾಗಿರುವ ಈ ಕಾಲಘಟ್ಟದಲ್ಲಿ ಕೃಷಿಕರಿಗೆ ಆಧುನಿಕ ಯಂತ್ರೋಪಕರಣಗಳ ಪರಿಚಯಿಸಬೇಕಾಗಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲಾ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಸರಕಾರದ ನೆರವಿನಿಂದ ಉತ್ತಮವಾಗಿ ಲಾಭದಲ್ಲಿ ಮುನ್ನಡೆಯುತ್ತಿರುವಾಗ, ಇಂತಹ ಸಂಸ್ಥೆಗಳು ಪ್ರತಿ ಹೋಬಳಿಗೆ ಎರಡರಂತೆ ಕಟಾವು ಯಂತ್ರವನ್ನು ಖರೀದಿಸಲು ಚಿಂತನೆ ನಡೆಸಬೇಕು. ವ್ಯವಸಾಯ ಸೇವಾ ಸಹಕಾರಿ ಸಂಘಗಳು ಕೇವಲ ಕೃಷಿಗೆ ಮಾತ್ರ ಸೀಮಿತಗೊಳ್ಳದೆ ಸದಸ್ಯರ ಬದುಕಿನ ಪ್ರತಿಯೊಂದು ಕ್ಷಣಗಳಲ್ಲಿ, ಪ್ರತಿಯೊಂದು ಆಗು ಹೋಗುಗಳಿಗೆ ಸ್ಪಂದಿಸಬೇಕಾದ ಅವಶ್ಯಕತೆ ಇದೆ. ಬದಲಾದ ಕಾಲಘಟ್ಟದಲ್ಲಿ ಕಾರ್ಯವೈಖರಿಯನ್ನು ಬದಲಾವಣೆ ಮಾಡಿಕೊಳ್ಳಬೇಕಾದ ಸಂದಿಗ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದರು.

              ಕುಂದಾಪುರ ಪುರಸಭೆ ಅಧ್ಯಕ್ಷ ಕೆ.ಮೋಹನದಾಸ ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ರಾಜ್ಯದ ಮೂರನೇ ಹಣಕಾಸು ಆಯೋಗ ವರದಿ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ.ಕೊಡ್ಗಿ ಸಂಘದ ‘ಶತದೀಪ್ತಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಸಂಘದ ಮಾಜಿ ಅಧ್ಯಕ್ಷರುಗಳಾದ ಜಿ.ರಾಮಕೃಷ್ಣ ರಾವ್, ಕೆ.ವಿಶ್ವನಾಥ ಹವಾಲ್ದಾರ್, ಕೆ.ಪ್ರಭಾಕರ, ಕೆ.ರತ್ನಾಕರ ದೇವಾಡಿಗ, ಕೆ.ಸುಬ್ರಹ್ಮಣ್ಯ, ಕೆ.ಜಿ.ವೆಂಕಟರಮಣಯ್ಯ ಹಾಗೂ ಎಚ್.ಅಣ್ಣಯ್ಯ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಅವಿಸ್ಮರಣೀಯ ಸೇವೆಗಾಗಿ ವೈ.ಚಂದ್ರಶೇಖರ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಚ್.ಸೋಮಶೇಖರ ಶೆಟ್ಟಿ ಹಾಗೂ ಸಾಹಿತಿ ಶಾರದಾ ಭಟ್, ಅತ್ಯುತ್ತಮ ಕೃಷಿಕ ಸುಬ್ರಾಯ ಯಾನೆ ಸುಬ್ರಹ್ಮಣ್ಯ ಶೇರುಗಾರ್, ಅತ್ಯುತ್ತಮ ಗ್ರಾಹಕ ವಿಠಲ ನಾಯ್ಕ್ ಮತ್ತು ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಆಟಗಾರ, ಕುಂದಾಪುರದ ಸ.ಪ.ಪೂ ಕಾಲೇಜಿನ ವಿದ್ಯಾರ್ಥಿ ನಿರಂಜನ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ೮ ಮಂದಿ ಹಿರಿಯ ಠೇವಣಿದಾರರು, ಮೂರು ಮಂದಿ ಹಿರಿಯ ಸದಸ್ಯರು, ೭ ಮಂದಿ ಮಾಜಿ ಕಾರ್ಯದರ್ಶಿಗಳನ್ನು, ನಾಲ್ಕು ಮಂದಿ ನಿವೃತ್ತ ನೌಕರರನ್ನು ಹಾಗೂ ಹಾಲಿ ನಿರ್ದೇಶಕರು ಮತ್ತು ನೌಕರರನ್ನು ಗೌರವಿಸಲಾಯಿತು.

            ಕುಂದಾಪುರ ಎಪಿ‌ಎಂಸಿ ಅಧ್ಯಕ್ಷ ಕಿಶೋರ್‌ಕುಮಾರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕುಂದಾಪುರ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಎಸ್.ದಿನಕರ ಶೆಟ್ಟಿ, ಕುಂದಾಪುರ ಟಿ‌ಎಪಿಸಿ‌ಎಂಎಸ್‌ನ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಹಂಗಳೂರು ಗ್ರಾ.ಪಂ. ಅಧ್ಯಕ್ಷೆ ವನಜ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎಸ್.ಸಿದ್ಧಾರ್ಥ, ಎಸ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಎಸ್.ರಾಜು ಪೂಜಾರಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಣಿಗೋಪಾಲ, ಜಿ.ಪಂ. ಸದಸ್ಯ ಗಣಪತಿ ಟಿ.ಶ್ರೀಯಾನ್, ತಾ.ಪಂ. ಸದಸ್ಯ ಮಂಜು ಬಿಲ್ಲವ, ಸಂಘದ ಉಪಾಧ್ಯಕ್ಷ ಮಧುಕರ, ನಿರ್ದೇಶಕರಾದ ಕೆ.ಟಿ.ಸತೀಶ್, ಎಚ್.ಆರ್.ಶ್ರೀಧರ ನಾಯಕ್, ಬಿ.ಶೇಖರ, ಕುಸುಮ, ಶ್ರೀಕಾಂತ, ಎಂ.ಅಣ್ಣಪ್ಪ ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಕೆ.ದಿನಕರ ಕೊತ್ವಾಲ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ರಾಜೀವ ಶೆಟ್ಟಿ ವರದಿ ವಾಚಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಯು.ಎಸ್.ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com