ಕುಂದಾಪುರ: ಜಾಗತಿಕರಣದ ಈ ವೇಳೆಯಲ್ಲಿ ತುಳು ಹಾಗೂ ಕನ್ನಡ ಭಾಷಾಭಿಮಾನದೊಂದಿಗೆ ಸಾಹಿತ್ಯ ಮೇಳಗಳನ್ನು ಆಯೋಜಿಸುವುದರ ಮೂಲಕ ಜನರಲ್ಲಿ ಸದಭಿರುಚಿಯನ್ನು ಹೆಚ್ಚಿಸಬಹುದು ಎಂದು ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಹೇಳಿದ್ದಾರೆ.
ಇಲ್ಲಿನ ಕುಂದಪ್ರಭ ಟ್ರಸ್ಟ್ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘಗಳ ವತಿಯಿಂದ ಪ್ರೊ. ನಾವಡ ಸಾಹಿತ್ಯಾವಲೋಕನ ಮತ್ತು ಅಭಿನಂದನ, ತುಳು ಕೃತಿ ಅನಾವರಣ ಕಾರ್ಯಕ್ರಮವನ್ನು ಶನಿವಾರ ಕುಂದಾಪುರದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮದಲ್ಲದ ಭಾಷೆ, ಪ್ರದೇಶ, ಜಾತಿ ಬಗ್ಗೆ ಅಧ್ಯಯನ ನಡೆಸಿ ಸಂಸ್ಕೃತಿ ವಿಸ್ತರಣೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಈ ದಾರಿಯಲ್ಲಿ ಸಾಗುತ್ತಿರುವವರಲ್ಲಿ ಪ್ರೊ.ಎ.ವಿ ನಾವಡರು ಪ್ರಮುಖರು. ಸ್ಥಳೀಯತೆಯಿಂದ ವಿಶ್ವ ಮಾನವತೆಯೆಡೆಗೆ ನಾವಡರ ಅಧ್ಯಯನಶೀಲ ಬದುಕು ಸಾಗುತ್ತದೆ. ನಾವಡರಿಗೆ ಸಾಹಿತ್ಯಾಭಿರುಚಿ ಜಾಸ್ತಿಯಾಗಿದ್ದು, ಎಲ್ಲ ಸ್ತರದ ಸಮಾಜದ ಜೊತೆಗೆ ಸಮಾನವಾಗಿ ಬೆರೆಯುವುದರ ಮೂಲಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮತೋಲನ ಸಾಧಿಸಲು ನಿರಂತರವಾಗಿ ಹೋರಾಟ ನಡೆಸುವುದರ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಮುಖ್ಯ ಅತಿಥಿ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ಚಿನ್ನಪ್ಪಗೌಡ ಧರ್ಮದರ್ಶಿ ಹರಿಕೃಷ್ಷ ಪುನರೂರು, ಕುಂದಾಪುರ ರೋಟರಿ ಮಾಜಿ ಗವರ್ನರ್ ಸದಾನಂದ ದಾತ್ರ, ವಕೀಲ ಸಾಹಿತಿ ಎ.ಎಸ್.ಎನ್. ಹೆಬ್ಬಾರ್, ಮಂಗಳೂರಿನ ಕತಿಸಂ ಕೇಂದ್ರದ ನಿರ್ದೇಶಕ ಡಾ. ರತ್ನಾಕರ ಸದಾನಂದ, ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ, ಭಂಡಾರ್ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಮಡಾಮಕ್ಕಿ ಇದ್ದರು.
ಕೋ.ಶಿವಾನಂದ ಕಾರಂತ ಪ್ರಸ್ತಾವಿಕವಾಗಿ ಮಾತನಾಡಿದರು. ಕುಂದಪ್ರಭ ಟ್ರಸ್ಟ್ ಅಧ್ಯಕ್ಷ ಯು.ಎಸ್. ಶೆಣೈ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಡಾಮಕ್ಕಿ ಶಶಿಧರ ಶೆಟ್ಟಿ ವಂದಿಸಿದರು. ಶಿಕ್ಷಕ ವಿಶ್ವನಾಥ ಕರಬ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com