ಕುಂದಾಪುರ: ಇತ್ತೀಚೆಗೆ ಕುಂದಾಪುರ ಪರಿಸರದಲ್ಲಿ ನಡೆದ ಮಾನವ ಕಳ್ಳ ಸಾಗಣೆ ಮತ್ತು ಅರ್ಟಿಐ ಕಾರ್ಯಕರ್ತ ವಾಸುದೇವ ಅಡಿಗರ ಕೊಲೆಗೆ ಸಂಬಂಧಿಸಿದ ವರದಿಗಳಿಗೆ ಸಂಬಂಧಿಸಿದಂತೆ ತಾಲೂಕಿನ ಕೆಲ ಸ್ಥಾಪಿತ ಹಿತಾಸಕ್ತಿಗಳು ಕೆಲವು ಪತ್ರಕರ್ತರಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿರುವುದು ಮತ್ತು ಮುಖಾಮುಖಿ ಬೆದರಿಕೆಯೊಡ್ಡುತ್ತಿರುವುದು ಘಟನೆಗಳು ನಡೆದಿದ್ದು, ಇಂತಹ ವಿದ್ಯಮಾನಗಳು ಪತ್ರಕರ್ತರು ವಸ್ತುನಿಷ್ಟವಾಗಿ ಮತ್ತು ನಿರ್ಭೀತರಾಗಿರಾಗಿ ವರದಿ ಮಾಡಲು ತಡೆಯೊಡ್ಡುತ್ತಿವೆ. ಈ ರೀತಿ ಬೆದರಿಸುವ ಪ್ರವೃತ್ತಿಯನ್ನು ಕುಂದಾಪುರ ತಾಲೂಕು ಪತ್ರಕರ್ತರ ಸಂಘವು ಖಂಡಿಸಿದ್ದಲ್ಲದೇ ಇಂತಹ ಸಮಾಜ ಘಾತುಕ ಶಕ್ತಿಗಳಿಂದ ಪತ್ರಕರ್ತರಿಗೆ ರಕ್ಷಣೆಯೊದಗಿಸಬೇಕೆಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯನ್ನು ಕಾರ್ಯನಿರತ ಪತ್ರಕರ್ತರ ಸಂಘವು ಆಗ್ರಹಿಸಿದೆ.
ಪತ್ರಿಕಾ ವರದಿಗಳ ಕುರಿತು ನ್ಯಾಯೋಚಿತವಾದ ಅಸಮಾಧಾನ, ದೂರುಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ಕಾನೂನುಬದ್ದವಾದ ಮಾರ್ಗಗಳಿವೆ. ಅದನ್ನು ಬಿಟ್ಟು ಪತ್ರಕರ್ತರಿಗೆ ವ್ಯಕ್ತಿಗತ ಬೆದರಿಕೆ ಒಡ್ದುವ, ನಿಂದಿಸುವ ಪ್ರಕರಣಗಳನ್ನು ಸಂಘವು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತದೆ ಎಂಬುದನ್ನು ಇಂತಹ ವ್ಯಕ್ತಿಗಳು/ಸಂಘಟನೆಗಳು ಗಮನಿಸಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮತ್ತು ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.