ಕುಂದಾಪುರ: ಅಂತರ್ಜಾಲ ಮತ್ತು ವಿದ್ಯುನ್ಮಾದ ಯಂತ್ರಗಳ ಹಾವಳಿ ಹಾಗೂ ಸರಿಯಾದ ಮಾರ್ಗದರ್ಶನದ ಕೊರತೆಯಿಂದಾಗಿ ಇಂದಿನ ಯುವ ಪೀಳಿಗೆ ದಾರಿ ತಪ್ಪುತ್ತಿದ್ದಾರೆ. ಮಾನಸಿಕ ಒತ್ತಡ ಹೆಚ್ಚಾಗಿ ಖಿನ್ನತೆಗೆ ಒಳಪಟ್ಟು ತಮ್ಮ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಚಿಂತಕ ಹಾಗೂ ಧಾರ್ಮಿಕ ಮುಖಂಡ ಯಳಜಿತ್ ಮಂಗೇಶ ಶೆಣೈ ವಿಷಾದ ವ್ಯಕ್ತಪಡಿಸಿದರು.
ನಾಯ್ಕನಕಟ್ಟೆ ಸಂವೇದನಾ ಟ್ರಸ್ಟ್ ಆಶ್ರಯದಲ್ಲಿ ನಡೆದ ವಿವೇಕಾನಂದರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಯುವ ಜನತೆಗೆ ದಾರಿದೀಪ ವಿವೇಕಾನಂದರು ವಿಷಯದ ಕುರಿತು ಉಪನ್ಯಾಸ ನೀಡಿದರು. ಮನಸ್ಸು ಮತ್ತು ಅಹಂಕಾರ ಗಾಳಿ ಮತ್ತು ಬೆಂಕಿ ಇದ್ದಂತೆ. ಅವು ಯಾರ ಬುದ್ಧಿಮಾತನ್ನು ಕೇಳದೇ ವ್ಯಕ್ತಿತ್ವವನ್ನು ನಾಶ ಪಡಿಸುತ್ತದೆ. ಧರ್ಮ ಸಂಸ್ಕೃತಿ ವಿಶ್ವಬ್ರಾತೃತ್ವ ಜಗತ್ತಿಗೆ ತಿಳಿಸಿದ ಸ್ವಾಮಿ ವಿವೇಕಾನಂದರ ತತ್ವವನ್ನು ಅಳವಡಿಸಿಕೊಂಡಾಗ ಗುರಿಮುಟ್ಟಲು, ಸಮಾಜ ಪರಿವರ್ತನೆಯಾಗಲು ಸಾಧ್ಯ ಎಂದರು.
ಟ್ರಸ್ಟನ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ, ಖ.ರೈ.ಸೇ.ಸ.ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ವಲಯದ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ಮಂಜ, ಯುವ ಸಾಹಿತಿ ಹಾಗೂ ಪತ್ರಕರ್ತ ಚಂದ್ರ ಕೆ ಹೆಮ್ಮಾಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರವೀಂದ್ರ ಸ್ವಾಗತಿಸಿ, ನಾಗದೇವಾಡಿಗ ವಂದಿಸಿದರು. ಮಂಜುನಾಥ ದೇವಾಡಿಗ ನಿರೂಪಿಸಿದರು.