ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ವಿವಿ ಸ್ಥಾಪನೆಗೆ ವಿರೋಧವಿದೆ: ಮುತಾಲಿಕ್


ಕುಂದಾಪುರ: ಉತ್ತರ ಪ್ರದೇಶದಲ್ಲಿರುವ ಅಲಿಘಡ ವಿಶ್ವವಿದ್ಯಾಲಯ ಮಾದರಿಯ ವಿವಿಯನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಕೇಂದ್ರದ ಮಂತ್ರಿಯೊಬ್ಬರು ಚಿಂತಿಸುತ್ತದ್ದಾರೆ. ಅಲಿಘಡ್ ವಿಶ್ವವಿದ್ಯಾಲಯ ಒಂದು ಭಯೋತ್ಪಾದನಾ ಕೇಂದ್ರವಾಗಿದ್ದು ಉಗ್ರವಾದಿಗಳಾದ ಮದನಿ, ಅಪ್ಜಲ್‌ಗುರು ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದರು. ನಿರ್ಬಂಧಿತ ಸಿಮಿ ಸಂಘಟನೆ ಹುಟ್ಟಿಕೊಂಡಿದ್ದು ಕೂಡ ಇಲ್ಲಿಯೇ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಟಿಪ್ಪು ಸುಲ್ತಾನ್  ವಿವಿ ಸ್ಥಾಪನೆ ಮಾಡಲು ಬಿಡೋದಿಲ್ಲ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
       ಶುಕ್ರವಾರ ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮತ ಬ್ಯಾಂಕ್‌ಗೋಸ್ಕರ ಕಾಂಗ್ರೆಸ್ ಮುಸ್ಲಿಮರಿಗಾಗಿಯೇ ದೇಶದಲ್ಲಿ ಪ್ರತ್ಯೇಕ ವಿವಿ ಸ್ಥಾಪಿಸಲು ಹೊರಟು ರಾಷ್ಟ್ರದಲ್ಲಿ ಪ್ರತ್ಯೇಕತಾ ಭಾವ ಬಿತ್ತುತ್ತಿದೆ ಎಂದು ಆರೋಪಿಸಿದರು.
         ಪ್ರತ್ಯೇಕ ವಿವಿ ಸ್ಥಾಪಿಸುವುದರ ವಿರುದ್ಧ ಶ್ರೀರಾಮ ಸೇನೆ ರಾಜ್ಯಾದ್ಯಂತ ಜಾಗೃತಿ ಸಭೆ, ಪ್ರತಿಭಟನೆ ನಡೆಸಲಿದೆ. ದೇಶದ ಸಂವಿಧಾನದಲ್ಲಿಯೇ ಜಾತಿ ಹೆಸರಿನಲ್ಲಿ ಪ್ರತ್ಯೇಕ ವಿವಿ ಸ್ಥಾಪಿಸಲು ವಿರೋಧವಿರುವಾಗ ನಾವು ವಿವಿ ಮಾಡಿಯೇ ತೀರುತ್ತೇವೆ ಎಂಬ ಕೇಂದ್ರ ಮಂತ್ರಿಯ ಹಠದ ಹಿಂದೆ ವೋಟ್‌ಬ್ಯಾಂಕ್ ರಾಜಕಾರಣವಲ್ಲದೇ ಮತ್ತೆನೂ ಇಲ್ಲ ಎಂದು ಮುತಾಲಿಕ ಹೇಳಿದರು.

     ಬಿಜೆಪಿ ಹಿಂದೂ ಸಂಫಟನೆಯನ್ನು ದುರ್ಬಲಗೋಳಿಸುತ್ತಿದೆ:  ಹಿಂದೂ ಸಂಘಟನೆಯ ಬಲದಿಂದ ಅಧಿಕಾರಕ್ಕೆ ಬಂದ ಕರ್ನಾಟಕದ ಬಿಜೆಪಿ ಸರಕಾರ ಹಿಂದೂ ಸಂಘಟನೆಗಳ ಬಲ ಅಡಗಿಸಿದೆ. ಹಿಂದೂತ್ವದ ಮುಖವಾಡ ಧರಿಸಿ ಹಿಂದೂಗಳ ವಧೆ ಮಾಡುತ್ತಿದೆ.  ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ ಮುಂತಾದ ಪ್ರಕರಣಗಳನ್ನು ದಾಖಲಿಸಿ   ರಾಜಕಾರಣ ಮಾಡುತ್ತಿದೆ ಎಂದರು.

ನವೀನ ಸೂರಿಂಜೆ ಬಂಧನ ಅಕ್ಷಮ್ಯ: ಮಂಗಳೂರಿನಲ್ಲಿ ಹೋಂ ಸ್ಟೇ ದಾಳಿ ಪ್ರಕರಣದಲ್ಲಿ  ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಪತ್ರಕರ್ತ ನವೀನ್ ಸೂರಿಂಜೆಯನ್ನು ಬಂಧಿಸಿರುವು ಅಕ್ಷಮ್ಯ. ಪತ್ರಕರ್ತರಿಂದ ಮಾಹಿತಿ ಪಡೆಯುವುದಾದರೆ ಪೊಲೀಸರು ಇರುವುದು ಯಾಕೆ ಎಂದು ಅವರು ಪ್ರಶ್ನಿಸಿದರು. ಒಳಿತು ಕೆಡಕುಗಳ ತುಲನೆ ಮಾಡುವವರನ್ನೇ ಹದ್ದುಬಸ್ತಿನಲ್ಲಿಡಬೇಕೆಂಬ ಕೆಟ್ಟ ಚಾಳಿಯಿಂದ ಬಿಜೆಪಿ ಸರಕಾರ ಮಂಗಳೂರಿನಲ್ಲಿ ಪತ್ರಕರ್ತನನ್ನು ಬಂಧಿಸಿತು. ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಧರಣಿಯಲ್ಲಿ ಭಾಗವಹಿಸಿದ್ದೆ. ರಾಜ್ಯದಲ್ಲಿ ಮುಂದೆ ಇಂತಹ ಘಟನೆ ಮರುಕಳಿಸಬಾರದು ಎಂದು ಅವರು ಹೇಳಿದರು.

ಪ್ರೇಮಿಗಳ ದಿನಾಚರಣೆಗೆ ವಿರೋಧ: ಫೆ. 14ರಂದು ನಡೆಯುವ ವೆಲೆಂಟೈನ್ಸ್ ಡೇಯನ್ನು ಶ್ರೀರಾಮ ಸೇನೆ ವಿರೋಧಿಸಲಿದೆ. ವಿದೇಶಿ ಆಚರಣೆಯನ್ನು ರಾಜ್ಯದಲ್ಲಿ ನಡೆಸಲು ಬಿಡೋದಿಲ್ಲ. ಕಾಲೇಜು, ಹಾಸ್ಟೆಲ್, ಹೋಟೆಲ್‌ನಲ್ಲಿ ಪ್ರೇಮಿಗಳ ದಿನಾಚರಣೆ ಆಚರಿಸದಂತೆ ತಡೆ ಹಿಡಿಯಲಾಗುವುದು. ಈಗಾಗಲೇ ಆಚರಣೆ ನಡೆಯುವ ಸ್ಥಳಗಳ ಮುಖ್ಯಸ್ಥರಿಗೆ ಮನವಿ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ. ಆಚರಣೆಯ ಹಿಂದೆ ಬಹುರಾಷ್ಟ್ರೀಯ ಕಂಪನಿಯ ಹುನ್ನಾರ ಅಡಗಿದೆ. ಸೆಕ್ಸ್ ಮಾಫಿಯಾ, ಡ್ರಗ್ ಮಾಫಿಯಾ ಜಾಲವಿದೆ. ಆಚರಣೆಯ ಹೆಸರಿನಲ್ಲಿ ಮುಗ್ಧ ಯುವತಿಯರನ್ನು ವಂಚಿಸುವ ಬಹುದೊಡ್ಡ ಕೃತ್ಯ ಈ ಮೂಲಕ ನಡೆಯುತ್ತಿದೆ ಎಂದು ಅವರು ಆಪಾದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com