ಕುಂದಾಪುರ: ಇಲ್ಲಿನ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೋಡೆರಿ ಕಿರು ಬಂದರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನಿಡಿ ಕಾಮಗಾರಿಯ ಪ್ರಗತಿ ಪರಿಶಿಲನೆ ಮಾಡಿದರು.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಮಗಾರಿಯನ್ನು ಶೀಘ್ರ ಪುರ್ಣಗೊಳಿಸಿ ಎಡಮಾವಿನ ಹೊಳೆಗೆ ಸೇತುವೆ ನಿರ್ಮಿಸಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂದರು.
ಸರ್ಕಾರ ಮೀನುಗಾರರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಮೀನುಗಾರಿಕಾ ಬೋಟ್ಗಳಿಗೆ 1 ಲಕ್ಷದ 25ಸಾವಿರದವರೆಗೆ ಡಿಸೇಲ್ ಸಬ್ಸಿಡಿ, ಮೀನುಗಾರ ಮಹಿಳಾ ಸಂಘದ ಮೂಲಕ 3% ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿದ್ದು ಇದಕ್ಕಾಗಿ 75 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ, ರಾಜ್ಯದ ಮೀನುಗಾರರ ಬೋಟಿನ ಇಂಜಿನ್ 250 ಎಚ್ಪಿ ಮಾತ್ರವಿದ್ದು ಇದರಿಂದ ಬೋಟಿನ ದಕ್ಷತೆ ಕಡಿಮೆಯಿರುವುದರಿಂದ ಇದನ್ನು 350ಎಚ್ಪಿ ಗೆ ಹೆಚ್ಚಿಸುವ ಚಿಂತನೆ ನಡೆದಿದೆ. ಕರಾವಳಿಯ 300ಕಿ.ಮೀ ವರೆಗೆ ಸಮುದ್ರ ಕೊರೆತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಸುಮಾರು 911ಕೋಟಿ ವೆಚ್ಚದಲ್ಲಿ ಶಾಶ್ವತ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಕೆ. ಲಕ್ಷ್ಮೀನಾರಾಯಣ, ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಗೌರಿ ದೇವಾಡಿಗ, ತಾ.ಪಂ. ಸದಸ್ಯರಾದ ಮಹೇಂದ್ರ ಪೂಜಾರಿ, ಶ್ರೀಮತಿ ಮೊಗವೀರ, ಸದಾಶಿವ ಡಿ, ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಉಪಸ್ಥಿತರಿದ್ದರು.
ಈಶ್ವರ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.