ಮರವಂತೆ: ಚುನಾವಣೆಯಲ್ಲಿ ಆಮಿಷ, ಭೀತಿ, ಸ್ವಜನ ಹಿತದಿಂದ ಮುಕ್ತವಾಗಿ, ಅರ್ಹ ಪಕ್ಷ ಮತ್ತು ಅಭ್ಯಥರ್ಿಗೆ ಮತದಾನ ಮಾಡುವುದು ಒಂದು ನಾಗರಿಕ ಹೊಣೆ ಎಂದು ನಿವೃತ್ತ ಉಪನ್ಯಾಸಕ, ಮರವಂತೆ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಎಸ್. ಜನಾರ್ದನ ಹೇಳಿದರು.
ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಮತದಾತರ ದಿನಾಚರಣೆಯಲ್ಲಿ ಅವರು ಗ್ರಾಮದ ನವಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಕಾರವನ್ನು ರಚಿಸುವ ಮತ್ತು ಅದನ್ನು ಅಧಿಕಾರದಿಂದ ಕೆಳಗಿಳಿಸುವ ಮೊದಲ ಹೆಜ್ಜೆ ಮತದಾನ. ಈ ಪ್ರಕ್ರಿಯೆ ಕಲುಷಿತವಾದರೆ ಅದರ ಫಲವಾಗಿ ಸೃಷ್ಟಿಯಾಗುವ ಸರಕಾರವೇ ಕಳಂಕಿವಾಗುತ್ತದೆ. ಪರಿಣಾಮವಾಗಿ ಸರಕಾರದ ಅಧಿಕಾರಾವಧಿಯುದ್ದಕ್ಕೆ ಮತದಾತರು ತಾವು ನೆಟ್ಟ ವಿಷವೃಕ್ಷದ ಫಲವನ್ನು ತಿನ್ನಬೇಕಾಗುತ್ತದೆ. ಮತದಾರರು ತಮ್ಮ ಯೋಗ್ಯತೆಗೆ ತಕ್ಕುದಾದ ಸರಕಾರವನ್ನು ಪಡೆಯುತ್ತಾರೆ ಎನ್ನುವುದು ರಾಜ್ಯಶಾಸ್ತ್ರಜ್ಞರ ಅಭಿಮತ. ಆದುದರಿಂದ ಮತದಾತರು ಕ್ಷಣಿಕ ಪ್ರಲೋಭನೆಗೆ ಒಳಗಾಗದೆ ವಿವೇಚನೆಯಿಂದ ಮತದಾನ ಮಾಡಬೇಕು ಮತ್ತು ಎಲ್ಲರೂ ಮತ ನೀಡುವ ಮೂಲಕ ಅಲ್ಪಮತದಿಂದ ಸರಕಾರ ಸೃಷ್ಟಿಯಾಗಿ, ಪ್ರಜಾತಂತ್ರ ಅಣಕವಾಗುವ ಸ್ಥಿತಿಯಿಂದ ಅದನ್ನು ಪಾರುಮಾಡಬೇಕು ಎಂದು ಅವರು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಎ. ಸುಗುಣಾ ನವಮತದಾರರಿಗೆ ಪ್ರತಿಜ್ಞಾ ವಚನ ಬೋಧಿಸಿ, ಗುರುತು ಚೀಟಿ ವಿತರಿಸಿದರು. ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯ ಮನ್ಸೂರ್, ಮುಖ್ಯೋಪಾಧ್ಯಾಯಿನಿ ಕೆ. ಸಾವಿತ್ರಿ, ಮತಗಟ್ಟೆ ನೋದಣಿ ಅಧಿಕಾರಿ ಸೀತಾ ಜೋಗಿ, ಗ್ರಾಮ ಕರಣಿಕ ಸಂತೋಷ್, ಗ್ರಾಮ ಸಹಾಯಕ ಕೃಷ್ಣ ಮೊಗವೀರ, ಪಂಚಾಯತ್ ಸಿಬ್ಬಂದಿ ಪ್ರಭಾಕರ ಉಪಸ್ಥಿತರಿದ್ದರು.
ಮತಗಟ್ಟೆ ನೋಂದಣಿ ಅಧಿಕಾರಿ ಶೇಖರ ಮರವಂತೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಧಿಕಾರಿ ಬಿ. ನಾರಾಯಣ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com