ಮಕ್ಕಳ ಗ್ರಾಮಸಭೆ: ಬೇಡಿಕೆಗಳ ಮಹಾಪೂರ


ನಾವುಂದ: ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಹಲವಾರು ಬೇಡಿಕೆಗಳನ್ನು ಪಂಚಾಯಿತಿಯ ಮುಂದಿಟ್ಟು, ಅವುಗಳ ಪರಿಹಾರಕ್ಕೆ ಒತ್ತಾಯಿಸಿದರು.
      ಅರೆಹೊಳೆ ಶಾಲೆಯ ಸುಶ್ಮಿತಾ ಅರೆಹೊಳೆಗೆ ಬಸ್ ಸೌಕರ್ಯ, ಶಾಲೆಯಲ್ಲಿ ಪ್ರಯೋಗಾಲಯ, ಸೈಕಲ್ ಸ್ಟ್ಯಾಂಡ್, ಇಂಗುಗುಂಡಿ, ಚಿಕ್ತಾಡಿಯಲ್ಲಿ ಕಾಲುಸೇತುವೆ ಮತ್ತು ನಂದನಮಕ್ಕಿ ರಸ್ತೆ ದುರಸ್ತಿಗೆ ಆಗ್ರಹಿಸಿದರು. ಕೋಯಾನಗರ ಶಾಲೆಯ ದರ್ಶನ್ ಶೆಟ್ಟಿ ಕುದ್ರುಕೋಡಿನಲ್ಲಿ ದಾರಿದೀಪ, ಶಾಲೆಗೆ ತೆರೆದ ಬಾವಿ, ಶೌಚಾಲಯ, ಆಟದ ಮೈದಾನ ಸಮತಟ್ಟು ಗೊಳಿಸುವಿಕೆಗೆ ಒತ್ತಾಯ ಮಂಡಿಸಿದರು.
        ಮಸ್ಕಿ ಶಾಲೆಯ ಆಸ್ಮಿತಾ ಆಟದ ಮೈದಾನ, ಕಂಪ್ಯೂಟರ್, ವಾಚನಾಲಯ ಬೇಕೆಂದರು. ನಾವುಂದ ಶಾಲೆಯ ಪವಿತ್ರಾ ಶಾಲೆಯ ಶಿಥಿಲವಾದ ರಂಗಮಂಟಪಕ್ಕೆ ಕಾಯಕಲ್ಪ, ಪ್ರಯೋಗಾಲಯ, ಆವರಣ, ಸ್ವಚ್ಛತಾ ನಿರ್ವಹಣೆ, ಕಸದ ತೊಟ್ಟಿ, ಆಟದ ಮೈದಾನದ ದುರಸ್ತಿ, ಬಾಗಿನ ರಸ್ತೆ ದುರಸ್ತಿ, ಹೆದ್ದಾರಿಯಲ್ಲಿ ಸೂಚನಾ ಫಲಕ ವ್ಯವಸ್ಥೆ ಆಗಬೇಕು ಎಂದರು. ಪ್ರೌಢಶಾಲೆಯ ಟಿ. ಪೂಜಾ ಶಾಲೆಗೆ ಧ್ವನಿವರ್ಧಕ ಮತ್ತು ರಸ್ತೆ ಫಲಕಗಳಿಗೆ ಕೋರಿಕೆಯಿಟ್ಟರುಳು.
      ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಬೇಡಿಕೆಗಳನ್ನು ಯಥಾವಕಾಶ ಪೂರೈಸುವ ಭರವಸೆಯಿತ್ತರು.
        ಶಾಲೆಗಳ ಮಕ್ಕಳ ಪ್ರತಿನಿಧಿಗಳು ಮಕ್ಕಳ ಹಕ್ಕುಗಳ ಘೋಷಣಾ ಫಲಕಗಳನ್ನು ಹಿಡಿದು ಶಿಕ್ಷಕರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಸಭೆಗೆ ಬಂದರು. ಹರ್ಷಿತಾ ಜಾಗತಿಕ ಮಟ್ಟದಲ್ಲಿ ಮಕ್ಕಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಮತ್ತು ಅವುಗಳ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಚಾರ ಮಂಡಿಸಿದರು. ಮಕ್ಕಳ ಹಕ್ಕುಗಳ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.
          ಶಿಕ್ಷಣ ಸಂಯೋಜಕ ರಾಮು ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಶಿಕಲಾ, ಅರೆಹೊಳೆ ಆಯುಷ್ ವೈದ್ಯಾಧಿಕಾರಿ ಡಾ.ಹೇಮಲತಾ, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಹುಲಿಯಪ್ಪ ಗೌಡ, ಕಾರ್ಮಿಕ ನಿರೀಕ್ಷಕ ಜೀವನ್‌ಕುಮಾರ್ , ಅರೆಹೊಳೆ ಶಾಲೆಯ ಮುಖ್ಯೋಪಾಧ್ಯಾಯ ಭಾಸ್ಕರ ಶೆಟ್ಟಿ ಮಕ್ಕಳಿಗೆ ಲಭ್ಯವಿರುವ ಸೌಲಭ್ಯಗಳ ಮಾಹಿತಿ ನೀಡಿದರು.
        ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮಕ್ಕಳ ಪ್ರತಿನಿಧಿಗಳಾದ ಮಾರುತಿ, ಶಶಿಧರ, ಸುಪ್ರಿಯಾ, ಸನತ್, ರಮ್ಯಾ, ಗ್ರಾ.ಪಂ. ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಮಾಜಿ ಅಧ್ಯಕ್ಷರಾದ ನರಸಿಂಹ ದೇವಾಡಿಗ, ಜಗದೀಶ ಪೂಜಾರಿ, ಸದಸ್ಯರು, ಸಿಡಬ್ಲ್ಯೂಸಿ ಪ್ರತಿನಿಧಿಗಳಾದ ಉಷಾ ಶೆಟ್ಟಿ ಕೆದೂರು, ಉದಯ ಆವರ್ಸೆ ವೇದಿಕೆಯಲ್ಲಿದ್ದರು. ಅಭಿವೃದ್ಧಿ ಅಧಿಕಾರಿ ರಾಜೇಶ್ ಸಭೆಯನ್ನು ನಿರ್ವಹಿಸಿದರು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com