ಕುಂದಾಪುರ: ರೈಲ್ವೆಗೆ ಸಂಬಂಧಿಸಿದಂತೆ ಕರಾವಳಿ ಭಾಗದಲ್ಲಿ ಸಾಕಷ್ಟು ಬೇಡಿಕೆ ಇದ್ದು, ಇದರ ಪರಿಹಾರಕ್ಕೆ ಇಲಾಖೆ ಮುಂದಾಗಬೇಕಿದೆ. ಈ ಭಾಗದ ವ್ಯಾಪಾರ ವಹಿವಾಟುಗಳಿಗೆ ಅನೂಕೂಲವಾಗುವಂತೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಮಂಗಳೂರು-ಮಡಗಾಂವ್ ಇಂಟರ್ಸಿಟಿ ರೈಲಿನ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ. ಸ್ಥಳೀಯರ ಬೇಡಿಕೆಗೆ ಪೂರಕವಾಗಿ ಕಾರವಾರ-ಬೆಂಗಳೂರು ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸುವ ಬಗ್ಗೆಯೂ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
ಕುಂದಾಪುರದಲ್ಲಿನ ಸಮಸ್ಯೆಗಳಿಗೆ ಕುರಿತು ಪ್ರಾಸ್ತಾಪ ಮಾಡಿದ ಸಂಸದ ಜಯಪ್ರಕಾಶ ಹೆಗ್ಡೆ, `ಸಂಸದನಾಗಿ ಆಯ್ಕೆಯಾಗುವ ಮೊದಲೆ ಇಲ್ಲಿನ ಸಮಸ್ಯೆಗಳ ಕುರಿತು ಸ್ಥಳೀಯರ ಹೋರಾಟದಲ್ಲಿ ಭಾಗಿಯಾಗಿದ್ದ ನಾನು, ಸಂಸದನಾಗಿ ಆಯ್ಕೆಯಾದ ಬಳಿಕವೂ ಇದರ ಬಗ್ಗೆ ಗಮನ ಹರಿಸಿದ್ದ ಕಾರಣಕ್ಕಾಗಿ ಶಾಸ್ತ್ರಿ ಸರ್ಕಲ್ ಬಳಿಯ ಹೆದ್ದಾರಿ 66 ರಲ್ಲಿ ಫ್ಲೈ-ಓವರ್ ನಿರ್ಮಾಣ, ಬೆಂಗಳೂರು-ಕಾರವಾರ ರೈಲು ಸಂಚಾರ ಹಾಗೂ ನಿಲುಗಡೆ, ಗಣಕೀಕೃತ ಟಿಕೇಟ್ ಬುಕ್ಕಿಂಗ್ ವ್ಯವಸ್ಥೆ ಹಾಗೂ ಕೋಡಿ-ಕುಂದಾಪುರ ಸೇತುವೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕುಂದಾಪುರ-ಆನಗಳ್ಳಿ ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಬಾಕಿಯಿದ್ದು ಶೀಘ್ರದಲ್ಲಿ ಇದು ಪೂರ್ಣಗೊಳ್ಳುವ ವಿಶ್ವಾಸ ಇದೆ ಎಂದು ತಿಳಿಸಿದರು.
ಅವರು ಕುಂದಾಪುರದ ಪ್ರಧಾನ ಅಂಚೆ ಕಚೇರಿಯಲ್ಲಿ ಕುಂದಾಪುರದಲ್ಲಿ ಭಾರತೀಯ ಅಂಚೆ ಇಲಾಖೆ ಹಾಗೂ ಕೊಂಕಣ ರೈಲ್ವೆ ಜಂಟಿಯಾಗಿ ಪ್ರಾರಂಭಿಸಿದ ಗಣಕೀಕೃತ ರೈಲ್ವೆ ಮುಂಗಡ ಟಿಕೆಟ್ ಬುಕ್ಕಿಂಗ್ ಸೇವಾ ಕೌಂಟರ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪ್ರ ಡಾಟ್ ಕಾಂ - editor@kundapra.com