ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಗುರುವಾರ ಜರುಗಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಮಿತಿಯ ನೂತನ ಅಧ್ಯಕ್ಷ ಕೃಷ್ಣ ಪ್ರಸಾದ್ ಅಂಡತ್ಯಾಯ ಹಿಂದೆ ನಾನು ಅಧಿಕಾರ ಸ್ವೀಕರಿಸಿದ್ದ ಸಂದರ್ಭ ದೇವಳದ ವಾರ್ಷಿಕ ಆದಾಯ 8 ಕೋಟಿ ರೂ. ಇತ್ತು. ಈಗ 15 ಕೋಟಿ ರೂ.ಗೆ ತಲುಪಿದೆ. ದೇವಳದ ಆದಾಯ ಸೋರಿ ಹೋಗುವುದನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಹಿಂದೆ ದೇವಳದಲ್ಲಿ ದಿನಕ್ಕೆ 4 ಚಂಡಿಕಾಹೋಮ ನಡೆಯುತ್ತಿತ್ತು. ಇದರಿಂದ ಹರಕೆ ಹೊತ್ತು ಬರುವ ಭಕ್ತರಿಗೆ ಅವಕಾಶ ಸಿಗದೆ ಕ್ಷೇತ್ರದ ಬೇರೆ ಬೇರೆ ಕಡೆ ನಡೆಸುತ್ತಿದ್ದರು. ಈ ಪ್ರಕ್ರಿಯೆಗೆ ತಡೆಯೊಡ್ಡಿ ದೇವಳದಲ್ಲಿ ಪ್ರತಿದಿನ 8 ಚಂಡಿಕಾ ಹೋಮ ನಡೆಯುವಂತೆ ಮಾಡಿದ್ದೇನೆ ಎಂದರು.
ಪರಿಸರ ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ, ಪ್ಲಾಸ್ಟಿಕ್ ಬಾಟಲಿ ಹಾಗೂ ಕ್ಯಾರಿಬ್ಯಾಗ್ಗಳನ್ನು ಸಂಪೂರ್ಣ ನಿಷೇಧಿಸಿ ಕೊಲ್ಲೂರನ್ನು ತ್ಯಾಜ್ಯಮುಕ್ತ ಗ್ರಾಮವನ್ನಾಗಿ ಮಾಡಲು ಕಂಕಣಬದ್ಧರಾಗಿರುವುದಲ್ಲದೇ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಸಂಬಂಧಿಸಿದ ಜಾಗ ಎಲ್ಲೆಲ್ಲಿ ಅತಿಕ್ರಮಣ ಆಗಿದೆಯೇ ಅದನ್ನು ಕಾನೂನುಬದ್ಧವಾಗಿ ದೇವಳದ ಸುಪರ್ದಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸುದಾಗಿ ಅವರು ತಿಳಿಸಿದರು.
ಸಭಯಲ್ಲಿ ಕುಂದಾಪುರ ಎಸಿಎಫ್ ಮಂಜುನಾಥ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಣಿಗೋಪಾಲ, ದೇವಳದ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್.ಮಾರುತಿ, ಆರ್.ಎಸ್.ಎಸ್ ಪ್ರಮುಖ ಮುಖಂಡ ಸುಬ್ರಮಣ್ಯ ಹೊಳ್ಳ,
ಕೇತ್ರದ ಪ್ರದಾನ ಆರ್ಚಕ ಮಂಜುನಾಥ ಅಡಿಗ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಜೇಶ್ ಕೆ.ಎಮ್, ಸವಿತಾ ದೇವಾಡಿಗ, ಕಲ್ಪನಾ ಭಾಸ್ಕರ್,ಶ್ರೀನಿವಾಸ ಕಲ್ಲೂರಾಯ, ಅಣ್ಣಪ್ಪ ಖಾರ್ವಿ, ಜಯನಾಂದ ಹೋಬಳಿದಾರ್, ಡಾ.ಅತುಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com