ಬಸ್ರೂರು: ಅಚ್ಚಗನ್ನಡದ, ಸತ್ವಪೂರ್ಣವಾದ ಕುಂದಾಪುರ ಕನ್ನಡ ಉಳಿವಿಗಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬಸ್ರೂರು ಸರಕಾರಿ ಪ್ರೌಢಶಾಲೆಯ ವಠಾರದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಡೆದ ಕುಂದಾಪುರ ಕನ್ನಡದ ಹೋಯ್ಕ - ಬರ್ಕ್ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.
ಇಂದು ಜನರಲ್ಲಿ ಭಾಷಾ ಕೀಳರಿಮೆ ದೂರವಾಗಿದೆ. ಜನರು ತಮ್ಮ ಆಡುಭಾಷೆಗಳನ್ನು ಪ್ರತಿಬಿಂಬಿಸುವಲ್ಲಿ ಇಂತಹ ಸಮ್ಮೇಳನಗಳು ಪೂರಕವಾಗುತ್ತದೆ. ಕುಂದಾಪುರ ಕನ್ನಡ ಭಾಷಾ ಪುಸ್ತಕ ಪ್ರಕಟನೆಗೆ ಸರಕಾರ ಮುಂದಾಗಲಿದೆ ಎಂದರು.
ಸಮ್ಮೆಳನದ ಅಧ್ಯಕ್ಷತೆಯನ್ನು ಚುಟುಕು ಸಾಹಿತಿ, ಶಾಲಾ ಹಳೇ ವಿದ್ಯಾರ್ಥಿ ಎಚ್. ದುಂಡಿರಾಜ್ ವಹಿಸಿದ್ದರು.
ಚಿತ್ರನಟ, ನಿರ್ದೇಶಕ ಕಾಶೀನಾಥ್ ಮಾತನಾಡಿ, ಕುಂದಾಪುರ ಪರಿಸರದಲ್ಲಿಯೇ ಹುಟ್ಟಿ ಬೆಳೆದ ನನಗೆ ಇಲ್ಲಿನ ಭಾಷೆಯ ಬಗ್ಗೆ ಅಪಾರ ಅಭಿಮಾನವಿದೆ. ಈ ಭಾಷೆಯನ್ನು ಮುಂದಿನ ಚಲನಚಿತ್ರದಲ್ಲಿ ಬಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಕ.ಸಾ.ಪ. ಅಧ್ಯಕ್ಷ ನಾರಾಯಣ ಖಾರ್ವಿ, ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಕೋಟದ ಉಸಿರು ಸಂಸ್ಥೆಯ ನಿರ್ದೇಶಕ ವೆಂಕಟೇಶ ಭಟ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೆ.ವಿ. ಬಾಲಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿಗಾರ್, ಹಳೇ ವಿದ್ಯಾರ್ಥಿ ಸಂಘದ ಡಾ| ಬಿ.ವಿ. ಉಡುಪ ಮೊದಲಾದವರು ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಸ್ವಾಗತಿಸಿದರು. ದಿನಕರ ಆರ್. ಶೆಟ್ಟಿ, ಶಂಕರ ಬಿ. ಕಾರ್ಯಕ್ರಮ ನಿರೂಪಿಸಿದರು. ಪ್ರೊ| ಕೆ. ರಾಧಾಕೃಷ್ಣ ಶೆಟ್ಟಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com