ಕುಂದಾಪುರ: ಹಿಂದೂ ಜಾಗರಣ ವೇದಿಕೆ ಕೋಟೇಶ್ವರ-ಕುಂದಾಪುರ ಘಟಕ ಅಕ್ಬರುದ್ದೀನ್ ಓವೈಸಿ ಹೇಳಿಕೆ ವಿರೋಧಿಸಿ, ಭಾರತ ಸೈನಿಕರ ಶಿರಚ್ಛೇದನ ಹಾಗೂ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿಕೆ ಖಂಡಿಸಿ ಕೋಟೇಶ್ವರ ರಥಬೀದಿಯಲ್ಲಿ ಬೃಹತ್ ವಾಹನ ಜಾಥಾ ಮತ್ತು ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿತ್ತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್, ಆರ್ಎಸ್ಎಸ್ ಸೇರಿದಂತೆ ಕೆಲವೊಂದು ಹಿಂದೂಪರ ಸಂಘಟನೆಗಳ ಶಿಬಿರಗಳು ಭಯೋತ್ಪಾದನೆ ಕೇಂದ್ರಗಳಾಗಿವೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಓಟ್ ಬ್ಯಾಂಕ್ ಹೆಸರಿನಲ್ಲಿ ದೇಶವನ್ನು ಇಸ್ಲಾಮೀಕರಣಕ್ಕೆ ಕೊಂಡೊಯ್ಯುವ ಷಡ್ಯಂತ್ರ ಶಿಂಧೆಯವರದ್ದಾಗಿದೆ. ದೇಶ ವಿಭಜನೆಯ ಅವರ ಈ ಹೇಳಿಕೆ ಖಂಡನಾರ್ಹ. ಆರ್ಎಸ್ಎಸ್ ಹಾಗೂ ಕೆಲವು ಹಿಂದೂ ಸಂಘಟನೆಗಳು ಭಯೋತ್ಪಾದನೆ ತರಬೇತಿ ನೀಡುತ್ತಿವೆ ಎನ್ನುವ ಗೃಹ ಸಚಿವರ ಹೇಳಿಕೆ ನಿಜವೇ ಆಗಿದ್ದಲ್ಲಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಿ. ಇಲ್ಲವಾದಲ್ಲಿ ದೇಶದ ಜನರ ಮುಂದೆ ಅವರು ಬೇಷರತ್ ಕ್ಷಮೆ ಯಾಚಿಸಬೇಕು ಎಂದರು.
ಗಡಿ ಕಾಯುವ ಯೋಧರಿಗೆ ಯಾವ ಭದ್ರತೆ ಇಲ್ಲದಂತಾಗಿದೆ . ಸೈನಿಕರ ಆತ್ಮ ಬಲ ಹೆಚ್ಚಿಸುವ ಕಾರ್ಯ ಮೊದಲು ಆಗಬೇಕಿದೆ. ದೇಶ ಹಾಗೂ ಧರ್ಮದ ರಕ್ಷಣೆ ಪ್ರತಿಯೊಬ್ಬನ ಕರ್ತವ್ಯವಾಗಬೇಕು ಎಂದು ಸತ್ಯಜಿತ್ ಹೇಳಿದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ, ತಾಲೂಕು ಸಂಚಾಲಕ ಭಾಸ್ಕರ ಸಿದ್ದಾಪುರ, ರಾಜೇಶ ಕೋಟೇಶ್ವರ, ಧನಂಜಯ ಕುಂದಾಪುರ, ಗಣೇಶ, ಅಶೋಕ,ಸಂತೋಷ ಮಾರ್ಕೋಡು ಉಪಸ್ಥಿತರಿದ್ದರು. ಸಭೆಯ ಪೂರ್ವದಲ್ಲಿ ನಡೆದ ವಾಹನ ಜಾಥಾದಲ್ಲಿ ಸುಮಾರು 400ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com