ಹೆಮ್ಮಾಡಿ: ಕುಂದಾಪುರ-ಬೈಂದೂರು-ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಫೇವರ್ ಫಿನಿಶಿಂಗ್ ಡಾಮರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಇಲ್ಲಿನ ತಲ್ಲೂರು-ಹೆಮ್ಮಾಡಿ ಹೆದ್ದಾರಿ ದುರಸ್ತಿ ನಡೆದಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ದಿವ್ಯನಿರ್ಲಕ್ಷ್ಯದಿಂದಾಗಿ ಹೆಮ್ಮಾಡಿ ಸಮೀಪ ಅರಾಟೆ ರಾಷ್ಟ್ರೀಯ ಹೆದ್ದಾರಿ ಸೇತುವೆಯ ದುರವಸ್ಥೆ ಕೊನೆಗಾಣದಾಗಿದೆ. ನಿತ್ಯಸಂಚರಿಸುವ ಪ್ರಯಾಣಿಕರ ಬವಣೆ ಮಿತಿಮೀರಿದ್ದು, ತೀವ್ರ ಅಸಮಾಧಾನ ಭುಗಿಲೆದ್ದಿದೆ.
ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತಲ್ಲೂರು-ರಾಜಾಡಿ ಸೇತುವೆಗೆ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಸ್ಟಿಕ್ ಲೇಪನ ಕಾಮಗಾರಿ ಇತ್ತೀಚೆಗೆ ನಡೆದಿರುವುದು ಹೊರತುಪಡಿಸಿದರೆ, ಇತರ ಸೇತುವೆಗಳ ಮೇಲಿನ ಮ್ಯಾಸ್ಟಿಕ್ ಲೇಪನ ಸಂಪೂರ್ಣವಾಗಿ ಕಿತ್ತೆದ್ದುಹೋಗಿದ್ದು, ಹೆದ್ದಾರಿ ಸೇತುವೆ ಸಂಚಾರ ಅತ್ಯಂತ ದುಸ್ತರಮಯವಾಗಿದೆ. ಅರಾಟೆ ಹೆದ್ದಾರಿ ಸೇತುವೆಯಲ್ಲಿನ ಮ್ಯಾಸ್ಟಿಕ್ ಲೇಪನ ಸಂಪೂರ್ಣವಾಗಿ ಕಿತ್ತುಹೋಗಿದ್ದು, ನೋಡಿದವರಿಗೆ ಇಲ್ಲಿನ ಹೆದ್ದಾರಿ ಮಾಯವಾಗಿ ಕಂಬಳಗದ್ದೆಯೇನಾದರೂ ಸೃಷ್ಟಿಯಾದೆಯೇ ಎಂಬ ಅನುಮಾನವನ್ನು ಮೂಡಿಸುವಂತಿದೆ. ಸೇತುವೆ ಮೇಲಿನ ಸ್ಥಿತಿ-ಗತಿ ಎಷ್ಟರ ಮಟ್ಟಿಗೆ ಕರಾಬ್ ಆಗಿದೆ ಎಂದರೆ ದ್ವಿಚಕ್ರ, ತ್ರಿಚಕ್ರ ಸವಾರರು ಹಾಗೂ ಪ್ರಯಾಣಿಕರು ಇಲ್ಲಿನ ಸೇತುವೆ ಮೇಲೆ ಸಂಚರಿಸಲು ಭಯಪಡುವಂತಾಗಿದೆ.
ತಾಲೂಕಿನ ಪ್ರಮುಖ ಸೇತುವೆಗಳ ದು:ಸ್ಥಿತಿಯನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗದಿರುವುದರಿಂದ ಈ ಭಾಗದ ಅಪಾರ ಸಂಖ್ಯೆಯ ವಾಹನ ಸವಾರರು ಹಾಗೂ ನಿತ್ಯಪ್ರಯಾಣಿಕರ ಗೋಳು ಹೆಚ್ಚಿದೆ. ವಾಹನದಟ್ಟಣೆ, ಅತಿವೃಷ್ಟಿ ಮೊದಲಾದ ಕಾರಣಗಳಿಂದಾಗಿ ಸಾಕಷ್ಟು ಹದಗೆಟ್ಟುಹೋಗಿದ್ದ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತೀರಾ ತಡವಾಗಿ ಡಾಮರೀಕರಣ ಕಾಮಗಾರಿ ನಡೆದುದರಿಂದ ನಿತ್ಯಸಂಚಾರಿಗಳು ಹಾಗೂ ವಾಹನಸವಾರರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದರೆ ಹೆದ್ದಾರಿ ಸೇತುವೆಗಳ ದುಃಸ್ಥಿತಿಗೆ ಪರಿಹಾರ ಒದಗಿಸಲು ಇಲಾಖೆ ಮುಂದಾಗದಿರುವುದರಿಂದ ಸಂಚಾರಿಗಳ ಗೋಳು ಹೆಚ್ಚುತ್ತಲೇ ಇದೆ.
ಸಂಚಾರ ಭೀತಿದಾಯಕ

* ಚಿತ್ರ ವರದಿ- ಚಂದ್ರ ಕೆ. ಹೆಮ್ಮಾಡಿ