ಕುಂದಾಪುರ: ಸಂಪೂರ್ಣವಾಗಿ ಹದಗೆಟ್ಟಿರುವ ಪಡುಕೋಣೆ-ಆಲೂರು ರಸ್ತೆಮಾರ್ಗದ ಕೋಟೆಗುಡ್ಡೆ, ಇಗರ್ಜಿ , ವಿದ್ಯಾನಗರ, ಜಾರುಬಂಡಿ, ನಾಡಾ ರೈಲ್ವೇ ಸೇತುವೆ, ರಾಮನಗರ, ಗೇರುಕಟ್ಟೆ, ಬಡಾಕೆರೆ ಕ್ರಾಸ್-ಗುಡ್ಡೆಹೋಟೆಲ್, ಸಾಲ್ಗದ್ದೆ ಕ್ರಾಸ್, ಮಹಾಗಣಪತಿ, ಹರ್ಕೂರು ಕ್ರಾಸ್ ಮೊದಲಾದೆಡೆಯ ರಸ್ತೆಮಾರ್ಗ ದುರಸ್ತಿಗಾಗಿ ಮೂರು ತಿಂಗಳ ಹಿಂದೆಯೇ ಜಲ್ಲಿ ಬಂದು ಬಿದ್ದಿದ್ದರೂ ದುರಸ್ತಿ ಕಾರ್ಯ ಆರಂಭಗೊಂಡಿಲ್ಲ. ಜನ-ವಾಹನ ಸಂಚಾರ ಅತ್ಯಂತ ದುಸ್ತರಮಯವಾಗಿರುವ ಈ ರಸ್ತೆಯಲ್ಲಿನ ಹೊಂಡಗುಂಡಿಗಳಿಂದ ನಿತ್ಯಸಂಚಾರಿಗಳ ಬವಣೆ ಕೊನೆಗಾಣದಾಗಿದೆ.
ಕುಂದಾಪುರದಿಂದ ಗ್ರಾಮೀಣ ಪ್ರದೇಶಗಳಾದ ನಾಡಾ, ಪಡುಕೋಣೆ, ಹರ್ಕೂರು ಆಲೂರು ಮೊದಲಾದೆಡೆಗಳಿಗೆ ಸಂಪರ್ಕವನ್ನು ಕಲ್ಪಿಸಿರುವ ಪಡುಕೋಣೆ-ಆಲೂರು ರಸ್ತೆಮಾರ್ಗವು ಸುಸಜ್ಜಿತವಾಗಿ ದುರಸ್ತಿಯನ್ನೇ ಕಾಣದೇ ಹತ್ತಾರು ವರ್ಷಗಳೇ ಉರುಳಿವೆ. ಹೊಂಡಮಯವಾಗಿರುವ ಇಲ್ಲಿನ ರಸ್ತೆಮಾರ್ಗವು ಬೇಸಿಗೆಯಲ್ಲಿ ಧೂಳಿನ ಗೋಳು, ಮಳೆಗಾಲದಲ್ಲಿ ಮಳೆನೀರು ತುಂಬಿ ಕೆರೆಯಂತಾಗುವುದು ತಪ್ಪಿಲ್ಲ. ಭಾರೀ ಹೊಂಡಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಈ ರಸ್ತೆಯಲ್ಲಿ ಜನ-ವಾಹನ ಸಂಚಾರ ಅತ್ಯಂತ ದುಸ್ತರವಾಗಿದೆ.
ವಿಮೋಚನೆ ಕಾಣದ ಶಾಪಗ್ರಸ್ತ ರಸ್ತೆ !

ವಿಶೇಷವಾಗಿ ಇಲ್ಲಿನ ಗ್ರಾಮೀಣ ಭಾಗದ ನೂರಾರು ಜನಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾದ ಪಡುಕೋಣೆ-ಆಲೂರು ಅಭಿವೃದ್ಧಿ ಮಾತ್ರ ಇಂದಿಗೂ ಕನಸಾಗಿಯೇ ಉಳಿದಿದೆ. ನಾಡಾ-ಸೇನಾಪುರ ವ್ಯಾಪ್ತಿಯಲ್ಲಿನ ಬಹುತೇಕ ಮುಖ್ಯ ಹಾಗೂ ಗ್ರಾಮೀಣ ರಸ್ತೆಮಾರ್ಗಗಳಿಗೆ ಡಾಮರೀಕರಣ ನಡೆದಿದ್ದರೂ ನಾಡಾ-ಆಲೂರು ರಸ್ತೆಮಾರ್ಗ ಮಾತ್ರ ಆಡಳಿತಯಂತ್ರದ ಸಂಪೂರ್ಣ ಅವಗಣನೆಗೆ ಗುರಿಯಾಗಿದ್ದು, ಸಮಗ್ರವಾಗಿ ಅಭಿವೃದ್ಧಿ ಕಾಣದೇ ಶಾಪಗ್ರಸ್ತ ರಸ್ತೆ ಎನಿಸಿದೆ.
ಚಿತ್ರ ವರದಿ-ಚಂದ್ರ ಕೆ. ಹೆಚ್